ರಸ್ತೆ ಬದಿ ಟಿಸಿ: ಅಪಾಯದ ಆತಂಕ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 10
ಸ್ಥಳೀಯ ಪುರಸಭೆಯಿಂದ ಕೂಗಳತೆ ವ್ಯಾಪ್ತಿಯ ಕಲ್ಗುಡಿಯವರ ಪ್ಲಾಟ್‌ನಲ್ಲಿ ಸಾರ್ವಜನಿಕರು ಸಂಚರಿಸುವ ರಸ್ತೆ ಬದಿಯಲ್ಲಿರುವ ಹೆಸ್ಕಾಂನ ವಿದ್ಯುತ್ ಟ್ರಾನ್ಸ್‌ಫಾರ್ಮರ್ (ಟಿಸಿ) ಸಾರ್ವಜನಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡಿದೆ.
ಅಪಾಯಕ್ಕೆ ಎಡೆಮಾಡಿಕೊಟ್ಟಿರುವ ವಿದ್ಯುತ್ ಟಿಸಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಹೆಸ್ಕಾಂ ಅಧಿಕಾರಿಗಳಿಗೆ ಜನರು ವಿನಂತಿಸಿದರೂ ಇವರ ಮನವಿಗೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಇಲ್ಲಿನ ಜನರಿಗೆ ಯಾವ ಸಂದರ್ಭದಲ್ಲಿ ವಿದ್ಯುತ್ ಅವಘಡ ಸಂಭವಿಸುವುದೇ ಎನ್ನುವ ಆತಂಕ ಎದುರಾಗಿದೆ.
ಈ ಬಡಾವಣೆಯ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ಹೈ ವೊಲ್ಟೇಜ್ ವಿದ್ಯುತ್ ತಂತಿಗಳಿಂದ ಕೂಡಿದ ಟಿಸಿ ಸಮೀಪದಲ್ಲೇ ನಿತ್ಯ ಸಾರ್ವಜನಿಕರು, ಶಾಲಾ ಮಕ್ಕಳು ರಸ್ತೆಯಲ್ಲಿ ಸಂಚರಿಸುತ್ತಾರೆ.
ಬೆಂಕಿ ಕಿಡಿ: ಟಿಸಿಯಿಂದ ಆಗಾಗ ಬೆಂಕಿ ಕಿಡಿಗಳು ಸಿಡಿಯುತ್ತವೆ. ಇದರಿಂದ ಬಡಾವಣೆ ನಿವಾಸಿಗಳು ಭಯದ ನೆರಳಲ್ಲಿ ಜೀವಿಸುವಂತಾಗಿದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳದೇ ಇರುವುದು ಈ ಭಾಗದ ಸಾರ್ವಜನಿಕರನ್ನು ಸಿಟ್ಟಿಗೆಬ್ಬಿಸಿದೆ.
ಪ್ರತಿಭಟನೆಗೂ ಸ್ಪಂದಿಸಿಲ್ಲ: 10 ವರ್ಷದಿಂದ ವಾಸವಾಗಿರುವ ಬಡಾವಣೆ ಜನತೆಗೆ ರಸ್ತೆ, ಚರಂಡಿ, ನೀರು ಸೇರಿದಂತೆ ಯಾವುದೇ ಮೂಲ ಸೌಲಭ್ಯ ದೊರೆತಿಲ್ಲ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮನವಿ ಸಲ್ಲಿಸಲಾಗಿದೆ. ಜತೆಗೆ ಇತ್ತೀಚಿಗೆ ಬಡಾವಣೆಯ ಪುರಸಭೆ ಸದಸ್ಯೆ ವಿಜಯಲಕ್ಷ್ಮೀ ಚಟ್ಟೇರರನ್ನು ಬಡಾವಣೆಯಲ್ಲಿ ದಿಗ್ಬಂಧನೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಸ್ಥಳೀಯ ಪುರಸಭೆಯ ಅಧಿಕಾರಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕೂಡಲೇ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬೇರೆಡೆಗೆ ಸ್ಥಳಾಂತರಿಸುವುದು ಸೇರಿದಂತೆ ಬಡಾವಣೆಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ ನೀಡಿದ ಭರವಸೆ ಈಡೇರಿಲ್ಲ. ಈ ಕೂಡಲೇ ಕಲ್ಗುಡಿ ಪ್ಲಾಟ್‌ನಲ್ಲಿ ಅಳವಡಿಸಿರುವ ಟಿಸಿಯನ್ನು ಬೇರೆಡೆ ಸ್ಥಳಾಂತರಿಸಬೇಕು. ಜತೆಗೆ ಬಡಾವಣೆಗೆ ಮೂಲ ಸೌಲಭ್ಯ ನೀಡಲು ಮುಂದಾಗದಿದ್ದಲ್ಲಿ ಪ್ಲಾಟಿನ ನಿವಾಸಿಗಳು ಪುರಸಭೆ ಕಚೇರಿಗೆ ಬೀಗ ಜಡಿದು ಅಮರಣಾಂತ ಸತ್ಯಾಗ್ರಹಕ್ಕೆ ಮುಂದಾಗಲಿದ್ದೇವೆ ಎಂದು ರಜಾಕಸಾಬ್ ಅರಳಿಕಟ್ಟಿ, ತುಕಾರಾಮ ದಾಸರ, ಅರುಣ ಕುಂದರಗಿ, ಬಸವರಾಜ ಶಿರೋಳ, ಯಮನೂರಪ್ಪ ಲಕ್ಕಲಕಟ್ಟಿ, ಹುಚ್ಚಪ್ಪ ಪುಜಾರ, ಗಣೇಶ ರಾಯಬಾಗಿ, ಜಗದೀಶ ಕಲ್ಗುಡಿ, ಮೂಕಪ್ಪ ಗುಡೂರ, ತಿರುಪತಿ ಕಲ್ಲೋಡ್ಡರ, ಶರಣಪ್ಪ ಬಂಡಿ, ಶಂಕರಪ್ಪ ಪಾತ್ರೋಟಿ, ರವಿ ಯಂಕಂಚಿ, ತುಳಸಿಬಾಯಿ ರಾಯಬಾಗಿ, ಸುನಿತಾ ಕಲ್ಗುಡಿ, ಸುವರ್ಣ ದಾಸರ, ದಾವಲಬಿ ಆರಗಿದ್ದಿ, ಶಂಕ್ರವ್ವ ಯಂಕಂಚಿ, ಲಕ್ಷ್ಮೀಬಾಯಿ ಪಾತ್ರೋಟಿ, ಸರಸ್ವತಿ ರಾಯಬಾಗಿ ಎಚ್ಚರಿಸಿದ್ದಾರೆ.
ಕಲ್ಗುಡಿಯವರ ಪ್ಲಾಟ್‌ನಲ್ಲಿ ಅಳವಡಿಸಿರುವ ಟಿಸಿಯನ್ನು ಬೇರೆಡೆಗೆ ಸ್ಥಳಾಂತರಿಸಲು ಮೇಲಧಿಕಾರಿಗಳಿಂದ ಅನುಮತಿ ಪಡೆಯಲಾಗಿದೆ. ಆದರೆ, ಸ್ಥಳೀಯ ಪುರಸಭೆಯವರು ಅಭಿವೃದ್ಧಿ ಕರ ತುಂಬದಿರುವ ಕಾರಣ ಟಿಸಿ ಸ್ಥಳಾಂತರ ವಿಳಂಬವಾಗಿದೆ. ಈ ಕುರಿತು ಪುರಸಭೆಗೆ ಪತ್ರ ಬರೆಯಲಾಗಿದೆ ಅವರಿಂದ ಅಭಿವೃದ್ಧಿ ಕರ ದೊರೆತ ತಕ್ಷಣ ಟಿಸಿ ಬೇರೆಡೆಗೆ ಸ್ಥಳಾಂತರ ಮಾಡಲಾಗುವುದು.
ಟ ಐ.ಎಸ್. ಸೂಡಿ, ಹೆಸ್ಕಾಂ ಅಧಿಕಾರಿ
ಕಲ್ಗುಡಿ ಪ್ಲಾಟ್‌ನ ನಿವಾಸಿಗಳಿಗೆ ರಸ್ತೆ, ನೀರು, ಚರಂಡಿ ಸೇರಿದಂತೆ ಮೂಲ ಸೌಲಭ್ಯ ಒದಗಿಸುವ ಕುರಿತು ಈಗಾಗಲೇ ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಬಡಾವಣೆಯಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಇದಕ್ಕೆ ಸಾರ್ವಜನಿಕರು ಸಹಕರಿಸಬೇಕು.
-ಕವಿತಾ ಜಾಲಿಹಾಳ, ಪುರಸಭಾ ಅಧ್ಯಕ್ಷೆ
ಮೂಲ ಸೌಲಭ್ಯ ಒದಗಿಸುವ ಕುರಿತು ಪುರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಈಗಾಗಲೇ ಬಡಾವಣೆಯಲ್ಲಿ ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶೀಘ್ರ ಟಿಸಿ ಸ್ಥಳಾಂತರ ಸೇರಿ ಎಲ್ಲ ಮೂಲ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗುವುದು.
ವಿಜಯಲಕ್ಷ್ಮೀ ಚಟ್ಟೇರ, 18ನೇ ವಾರ್ಡಿನ ಪುರಸಭೆ ಸದಸ್ಯೆ
- ಡಿ.ಜಿ. ಮೋಮಿನ್