ಸೀಮೆಎಣ್ಣೆ ವಿತರಣಾ ಕೇಂದ್ರ ಉದ್ಘಾಟನೆ
ಗದಗ: ಸಾರ್ವಜನಿಕರಿಗೆ ಸೀಮೆಎಣ್ಣೆಯನ್ನು ಸರಿಯಾಗಿ ವಿತರಿಸುವಂತೆ ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಕರೆ ನೀಡಿದರು.
ಅವರು ಈಚೆಗೆ 16ನೇ ವಾರ್ಡ್ನ ಡೋರಗಲ್ಲಿ ಹತ್ತಿರ ಇರುವ ಐ.ಎಂ. ಕಾತರಕಿ ಅವರ ಸೀಮೆಎಣ್ಣೆ ವಿತರಣಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈ ಭಾಗದಲ್ಲಿ ಬಡ ಕೂಲಿಕಾರರು ಹಾಗೂ ಮಧ್ಯಮ ವರ್ಗದವರು ಸಾಕಷ್ಟು ಜನ ವಾಸಿಸುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿಯಲ್ಲಿ ಸರ್ಕಾರದ ಆದೇಶದ ಪ್ರಕಾರ ಒಂದು ಕುಟುಂಬಕ್ಕೆ 5 ಲೀ. ಮತ್ತು ಸಣ್ಣ ಕುಟುಂಬಕ್ಕೆ 3 ಲೀ. ಸೀಮೆಎಣ್ಣೆ ವಿತರಿಸಬೇಕು. ಈ ಕುರಿತು ವಿತರಕರು ಸಮರ್ಪಕ ದಾಖಲೆ ಇಡಬೇಕು. ಅದರಿಂದ ಅಕ್ರಮವಾಗಿ ಸೀಮೆಎಣ್ಣೆ ಮಾರಾಟ ಮಾಡುವುದನ್ನು ತಡೆಹಿಡಿಯಬಹುದಾಗಿದೆ.
ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು ಬಡವರು ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು. ನಜೀರಸಾಬ್ ಮಾನ್ವಿ, ಎಸ್.ಐ. ತೋಟದ, ಫಕ್ಕೀರಪ್ಪ ಅನವಾಳ, ಅನ್ನಪೂರ್ಣಾ ಹಳೇಮಠ, ರುಕ್ಮವ್ವ ಗಾಮನಗಟ್ಟಿ, ಜಾರನಾ ಜಾಲಿಹಾಳ, ಮರಜವ್ವ ಮಣ್ಣಮ್ಮನವರ, ಕನಕಪ್ಪ ಚಲವಾದಿ, ಹಸನಸಾಬ್ ತಹಸೀಲ್ದಾರ್, ನಾಗರಾಜ ಡೋಣಿ, ಐ.ವಿ. ಕಾತರಕಿ ಮುಂತಾದವರು ಉಪಸ್ಥಿತರಿದ್ದರು.
ಇಂದು ಸಂವಾದ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಸಂಘದ, ದೊರಸ್ವಾಮಿ ವಿರಕ್ತಮಠದ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾಗೃತಿ ಅಭಿಮಾನದ ನಿಮಿತ್ತ ನ. 11ರಂದು ಮಧ್ಯಾಹ್ನ 12ಕ್ಕೆ ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡದ ಪ್ರತಿಭೆಗಳೊಂದಿಗೆ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ದೊರಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ಸಮನ್ವಯಾಧಿಕಾರಿಗಳಾದ ಪಿ.ಎಫ್. ಸೋಲಾಪುರಿ, ಪ್ರಾಚಾರ್ಯ ನಾರಾಯಣ ವೈದ್ಯ, ಪರಿವೀಕ್ಷಕ ಎಸ್.ಎಂ. ಉಕ್ಕಲಿ, ಶಿಕ್ಷಣ ಸಂಯೋಜಕ ಜೆ.ಡಿ. ಪಂಡಿತ, ಮುಖ್ಯೋಪಾಧ್ಯಾಯ ಎಸ್.ಜಿ. ಮಣ್ಣೂರಮಠ, ಕನ್ನಡದ ಕೋಟ್ಯಧಿಪತಿ ಹುಸೇನ ಭಾಷಾ, ಮಂಜುಳಾ ಮುನವಳ್ಳಿ, ಎ.ಎ. ನದಾಫ್ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.