ಹೊರಟ್ಟಿ, ತುರಮರಿ ಕಾರ್ಯಕ್ಕೆ ಶ್ಲಾಘನೆ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಗೆ ಕೇವಲ 24 ಗಂಟೆಗಳಲ್ಲಿ ಆಟದ ಮೈದಾನ ಸಿದ್ಧಗೊಳಿಸುವಲ್ಲಿ ದಿಟ್ಟ ಕ್ರಮ ಕೈಗೊಂಡ ಜಿಪಂ ಸಿಇಒ ವೀರಣ್ಣ ತುರುಮರಿ ಕಾರ್ಯ ಶ್ಲಾಘನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಾಜಿ ಶಿಕ್ಷಣ ಸಚಿವ ಹಾಗೂ ವಿಪ ಸದಸ್ಯ ಬಸವರಾಜ ಹೊರಟ್ಟಿ 2 ದಿನಗಳ ಕಾಲ ಮುಂಡರಗಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಅಡವಿಸೋಮಾಪುರ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲೆಯ ಮುಂದಿರುವ ಅವ್ಯವಸ್ಥೆಯ ಆಟದ ಮೈದಾನ ಕಂಡು ಬೇಸರ ವ್ಯಕ್ತಪಡಿಸಿದ ಅವರು, ಜಿಪಂ ಸಿಇಒ ವೀರಣ್ಣ ತುರುಮರಿ ಅವರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಅವರು, ಹೊರಟ್ಟಿಯವರು ಪ್ರವಾಸ ಮುಗಿಸಿಕೊಂಡು ಮುಂಡರಗಿ ತಾಲೂಕು ಬಿಡುವುದರೊಳಗಾಗಿ 24 ಗಂಟೆಗಳಲ್ಲಿ ಸಾವಿರಾರು ಟ್ರಿಪ್ ಕೆಂಪು ಮಣ್ಣು ಬಳಸಿ ಆಟದ ಮೈದಾನ ಸಿದ್ಧಗೊಳಿಸಿದ್ದಾರೆ ಹೊರಟ್ಟಿ ಹಾಗೂ ಸಿಇಒ ಅವರ ಕಾರ್ಯ ಶ್ಲಾಘನೀಯ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.