ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ರಮ ಮಣ್ಣು ಅಗೆತ

Lingaraj Badiger
Updated On : 12 Nov 2013, 11:22 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 11
ಪಟ್ಟಣದಿಂದ ಕೇವಲ 5 ಕಿ.ಮೀ. ದೂರವಿರುವ (ಕಡಪಟ್ಟಿ ಮತ್ತು ಹುಲಿಕಲ್ ಅಡವಿ) ಸರ್ಕಾರಿ ಅರಣ್ಯ ಪ್ರದೇಶದಲ್ಲಿನ ಮಣ್ಣನ್ನು ಹಗಲು ರಾತ್ರಿ ಎನ್ನದೇ ಖಾಸಗಿ ವ್ಯಕ್ತಿಗಳು ನಿತ್ಯ ನೂರಾರು ಟ್ರ್ಯಾಕ್ಟರ್ ಮೂಲಕ ಅರಣ್ಯ ಇಲಾಖೆ ಎದುರಿನಿಂದಲೇ ಅಕ್ರಮವಾಗಿ ಸಾಗಿಸುತ್ತಿದ್ದು, ಅರಣ್ಯ ಇಲಾಖೆ ಯಾವೊಬ್ಬ ಅಧಿಕಾರಿಯೂ ಇದನ್ನು ತಡೆಯಲು ಮುಂದಾಗುತ್ತಿಲ್ಲ. ಇದು ಹಲವು ಅನುಮಾನಕ್ಕೆಡೆ ಮಾಡಿಕೊಟ್ಟಿದೆ.
ರಸ್ತೆ ಕಾಮಗಾರಿ, ಸೇತುವೆ ನಿರ್ಮಾಣಕ್ಕೆ, ಇಟ್ಟಂಗಿ ತಯಾರಿಕೆಗೆ, ಮನೆ ಕಟ್ಟಲು ಬೇಕಾಗುವ ಕೆಂಪು ಮತ್ತು ಗರಸು ಮಣ್ಣಿಗಾಗಿ ಕೆಲವು ಪ್ರಭಾವಿ ಗುತ್ತಿಗೆದಾರರು ಅರಣ್ಯ ಇಲಾಖೆಯಿಂದ ಯಾವುದೇ ಪರವಾನಗಿ ಪಡೆಯದೇ, ಇಲಾಖೆಗೆ ಯಾವುದೇ ಹಣ ಭರಣ ಮಾಡದೇ, ಅರಣ್ಯ ಪ್ರದೇಶದಲ್ಲಿನ ಗಿಡಗಳನ್ನು ಸಂಪೂರ್ಣ ಕಡಿದು ಹಾಕಿ, ಸುಮಾರು 4-5 ಅಡಿ ಆಳದವರೆಗೆ ಅಗೆದು ಫಲವತ್ತಾದ ಕೆಂಪು ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ.
ಖಾಸಗಿ ವ್ಯಕ್ತಿಗಳ ದರ್ಪ: ಹೊಸಳ್ಳಿ, ಮಜ್ಜೂರ, ವರವಿ, ಬಟ್ಟೂರ, ಛಬ್ಬಿ, ಮಾಚೇನಹಳ್ಳಿ ಮುಂತಾದ ಗ್ರಾಮಗಳ ಹೊರ ವಲಯದ ಸರ್ಕಾರಿ ಅರಣ್ಯ ಪ್ರದೇಶದಲ್ಲಿ ಕೆಂಪು ಮಣ್ಣು ಸಮೃದ್ಧವಾಗಿರುವುದರಿಂದ ಖಾಸಗಿ ವ್ಯಕ್ತಿಗಳು ಸರ್ಕಾರದ ಪರವಾನಗಿ ಪಡೆಯದೇ ರಾಜಾ ರೋಷವಾಗಿ ಸಾಗಿಸುತ್ತಿದ್ದಾರೆ. ಅನೇಕ ಬಾರಿ ಗ್ರಾಮಸ್ಥರು ಮಣ್ಣು ಅಗೆತ ನಿಲ್ಲಿಸುವಂತೆ ಒತ್ತಾಯ ಮಾಡಿದರೂ, ಅಧಿಕಾರಿಗಳೇ ನಮ್ಮನ್ನು ಕೇಳುತ್ತಿಲ್ಲ ಎಂದು ಅಹಂನಿಂದ ಖಾಸಗಿ ವ್ಯಕ್ತಿಗಳು ವರ್ತಿಸುತ್ತಿದ್ದಾರೆ.
ನಿರ್ಲಕ್ಷ್ಯ: ರಸ್ತೆಯ ಪಕ್ಕದಲ್ಲಿಯೇ ಈ ಅಕ್ರಮ ಕಾರ್ಯ ನಡೆಸುತ್ತಿದ್ದರಿಂದ ಈ ವಿಷಯ ದಾರಿ ಹೋಕರಿಗೆ ಗೊತ್ತಿದೆ. ಅರಣ್ಯ ಸಂಪತ್ತು ಲೂಟಿ ಮಾಡುವುದನ್ನು ತಡೆಯಲು ಅನೇಕ ಬಾರಿ ಗಲಾಟೆಗಳು ನಡೆದಿವೆ. ಈ ಪ್ರದೇಶದಲ್ಲಿ ಮಣ್ಣು ಅಗೆಯಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಪರವಾನಗಿ ತೆಗೆದುಕೊಂಡಿದ್ದಾಗಿ ಗುತ್ತಿಗೆದಾರರು ಹೇಳುತ್ತಿದ್ದಾರೆ. ಅವರ ಮಾತಿಗೆ ಸಂಶಯ ವ್ಯಕ್ತಪಡಿಸಿದ ಯುವಕರು, ಪರವಾನಗಿ ಪತ್ರವನ್ನು ತೋರಿಸಿ ನಂತರ ಚಟುವಟಿಕೆ ಮುಂದುವರಿಸುವಂತೆ ಸೂಚಿಸಿದ ಘಟನೆಗಳು ನಡೆದಿವೆ. ವಿಚಿತ್ರವೆಂದರೆ ಅಕ್ರಮ ಮಣ್ಣು ಅಗೆತ ಕಾರ್ಯ ನಡೆಯುವ ಸ್ಥಳದಿಂದ ಅಣತಿ ದೂರದಲ್ಲಿ ಅರಣ್ಯ ಇಲಾಖೆಯವರು ನರ್ಸರಿ ಮಾಡಿ ಸಸಿ ಬೆಳೆಸುತ್ತಿದ್ದರೂ ಇತ್ತ ಗಮನ ಹರಿಸದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕಾನೂನಿನ ಕಣ್ಣಿಗೆ ಮಣ್ಣೆರಚಿ ಸರ್ಕಾರದ ಸಂಪತ್ತನ್ನು ಕೊಳ್ಳೆ ಹೊಡೆಯುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement