ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಕ್ಷರ ದಾಸೋಹ ನೌಕರರ ಪ್ರತಿಭಟನೆ

Lingaraj Badiger
Updated On : 12 Nov 2013, 11:15 am

ಗದಗ: ರಾಜ್ಯದ ಬಿಸಿಯೂಟ ಯೋಜನೆಯನ್ನು ಸರ್ಕಾರ ಖಾಸಗೀಕರಣ ಮಾಡಲು ಹೊರಟಿದ್ದು, ಇದು ನೌಕರರ ಜೀವನಕ್ಕೆ ಕುತ್ತ ತರಲಿದೆ. ಆದ್ದರಿಂದ ತಕ್ಷಣವೇ ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಅಕ್ಷರ ದಾಸೋಹ ನೌಕರರ ತಾಲೂಕು ಸಂಘ ಸಿಐಟಿಯು ನೇತೃತ್ವದಲ್ಲಿ ಸೋಮವಾರ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ 1 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 69 ಲಕ್ಷ ವಿದ್ಯಾರ್ಥಿಗಳಿಗೆ ನಿತ್ಯ ಅಡುಗೆ ತಯಾರಿಸಲು 1 ಲಕ್ಷಕ್ಕೂ ಅಧಿಕ ಅಡುಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಇದುವರೆಗೂ ಯಾವುದೇ ಸೇವಾ ಸೌಲಭ್ಯ ಹಾಗೂ ಕನಿಷ್ಠ ವೇತನವಿಲ್ಲದೇ 11 ವರ್ಷಗಳಿಂದ ಈ ಯೋಜನೆ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದರೂ ಸರ್ಕಾರ ಸ್ಪಂದಿಸಿಲ್ಲ.
ನೌಕರರು ಅತ್ಯಂತ ಕನಿಷ್ಠ ಪ್ರತಿ ದಿನ ರು. 38 ವೇತನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪಕ್ಕದ ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಅಡುಗೆ ಸಿಬ್ಬಂದಿಗೆ ರು. 150 ಗೌರವಧನ ಹಾಗೂ ಉದ್ಯೋಗ ಖಾತ್ರಿ ಕೆಲಸ ಮಾಡುವವರಿಗೆ ರು. 174 ವೇತನ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ ಮಾತ್ರ ಪ್ರತಿ ಹಂತದಲ್ಲಿಯೂ ಬಿಸಿಯೂಟ ನೌಕರರನ್ನು ಕಡೆಗಣಿಸಲಾಗುತ್ತಿದೆ.
ಸರ್ಕಾರ ವಿವಿಧ ಯೋಜನೆಗಳಿಗೆ ದುಡಿವ ಕಾರ್ಯಕರ್ತರಿಗೆ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆಯನ್ನು ನೀಡಬೇಕೆಂದು ಭಾರತೀಯ ಕಾರ್ಮಿಕರ ಸಮ್ಮೇಳನ ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಈ ಆಧಾರದಲ್ಲಿ ಬಿಸಿಯೂಟ ನೌಕರರಿಗೆ ಕನಿಷ್ಠ ರು. 3 ಸಾವಿರ ಗೌರವಧನ ನೀಡಬೇಕು. ಈಗಾಗಲೇ ಇಸ್ಕಾನ್‌ನಂತಹ ಸಂಸ್ಥೆಗಳಿಗೆ ಬಿಸಿಯೂಟ ನಿರ್ವಹಣೆಯನ್ನು ನೀಡಿರುವ ಹಿನ್ನೆಲೆಯಲ್ಲಿ ರು. 40 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ.  ಇಸ್ಕಾನ್‌ನಂತಹ ಸಂಸ್ಥೆಗಳು ಬಿಸಿಯೂಟವನ್ನು ವ್ಯಾಪಾರವನ್ನಾಗಿ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಖಾಸಗೀಕರಣದ ಅಪಾಯವನ್ನು ಅರಿತು, ಸರ್ಕಾರ ಶ್ರಮಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಯೋಜನೆಯನ್ನು ಖಾಸಗೀಕರಣ ಮಾಡದೇ, ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಡಿಸೆಂಬರ್‌ನಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟ ಹೋರಾಟ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ತಮ್ಮ 16 ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶೋಭಾ ನರಗುಂದ, ನಾಗರತ್ನಾ ಬಡಿಗಣ್ಣವರ, ಯಶೋದಾ ಬೆಟಗೇರಿ, ನೀಲಾ ಬಾರಕೇರ, ಕ್ಲೇರಾ ಗೊರವರ, ಲಕ್ಷ್ಮವ್ವ ಚಿಲಕವಾಡ, ಗೀತಾ ಹುಚ್ಚಣ್ಣವರ, ರೇಣುಕಾ ತಳವಾರ, ಶಾಂತಾ ಇಮ್ಮಡಿ, ಬಾಲಾ ರಾಠೋಡ, ಶಿವು ಚವ್ಹಾಣ, ಶರಣಯ್ಯ ಸೂಗಿರಯ್ಯನಮಠ ಮುಂತಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement