ಇಂದು 'ಕವಿ ಕಾವ್ಯ ಕುಂಚ'
ಗದಗ: ನ. 12ರಂದು ಸಂಜೆ 6.30ಕ್ಕೆ ನಗರದ ರೋಟರಿ ಐ ಕೇರ್ ಸೆಂಟರ್ನಲ್ಲಿ ಗದಗ-ಬೆಟಗೇರಿ ರೋಟರಿ ಕ್ಲಬ್ನ ಸಾಪ್ತಾಹಿಕ ಸಭೆ, ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನುಡಿ ಹಬ್ಬದ 'ಕವಿ ಕಾವ್ಯ ಕುಂಚ' ಕಾರ್ಯಕ್ರಮ ನಡೆಯಲಿದೆ. ಡಾ. ಅಶೋಕ ಮತ್ತಿಕಟ್ಟಿ ಬರೆದ ಕಾವ್ಯಕ್ಕೆ ಹಿರಿಯ ಚಿತ್ರ ಕಲಾವಿದ ಪಿ.ಎ. ಕುಲಕರ್ಣಿ ಚಿತ್ರ ಬಿಡಿಸುವರು. ಜನಪದ ಗಾಯಕ ಗವಿಸಿದ್ದಯ್ಯ ಹಳ್ಳಿಕೇರಿಮಠ ಕವಿತೆಗೆ ರಾಗ ಸಂಯೋಜಿಸಿ ಗಾಯನ ಹಾಡುವರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ಡಾ. ಪ್ರದೀಪ ಉಗಲಾಟದ ವಹಿಸುವರು. ಆತಿಥ್ಯವನ್ನು ನವೀನ ಕುಷ್ಟಗಿ ವಹಿಸುವರು. ಕ್ಲಬ್ನ ಸರ್ವ ಸದಸ್ಯರು ಆಗಮಿಸಬೇಕು ಎಂದು ಕ್ಲಬ್ ಕಾರ್ಯದರ್ಶಿ ಪ್ರಾ. ಉಮೇಶ ಬಾರಕೇರ ಹಾಗೂ ಗದಗ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕವಿತಾ ದಂಡಿನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತದಾರರ ನೋಂದಣಿಗೆ ನ. 15 ಕೊನೆಯ ದಿನ
ಗದಗ: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರಿಗಾಗಿ ಹೆಸರು ನೋಂದಾಯಿಸಲು ಅರ್ಹ ಪದವೀಧರರಿಗೆ ನ. 15 ರವರೆಗೆ ಅವಕಾಶ ನೀಡಲಾಗಿದೆ. ಗದಗ ಜಿಲ್ಲಾ ವ್ಯಾಪ್ತಿಯಲ್ಲಿ 2010ರ ಅ. 31ರ ಪೂರ್ವದಲ್ಲಿ ಪದವಿ ಪಡೆದಿರುವ ಅರ್ಹರು ಪಟ್ಟಿಯಲ್ಲಿ ಹೆಸರು ಸೇರಿಸಲು ತಮ್ಮ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ನಮೂನೆ 18ನ್ನು ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಬೇಕು. ಮತದಾರರ ವಿವರ ತಿದ್ದುಪಡಿಗೆ ನ. 8 ರಲ್ಲಿ, ಪಟ್ಟಿಯಿಂದ ಕೈಬಿಡಲು 7, ಮತಕ್ಷೇತ್ರದ ವ್ಯಾಪ್ತಿಯಲ್ಲಿ ವರ್ಗಾವಣೆಗೆ 8-ಎ ನಮೂನೆಗಳಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೌಲಾನಾ ಅಬುಲ್ ಕಲಾಂ ಜನ್ಮದಿನಾಚರಣೆ
ಗದಗ: ಮೌಲಾನಾ ಅಬುಲ್ ಕಲಾಂ ಆಝಾದ್ರವರು ಹಿಂದೂ-ಮುಸ್ಲಿಂ ಏಕತೆಗೆ ಕರೆಕೊಟ್ಟು, ದೇಶದ ಸಂಸ್ಕೃತಿ ಎತ್ತಿ ಹಿಡಿದವರು ಎಂದು ಉಪನ್ಯಾಸಕ ಡಿ.ಎಸ್. ನಾಯಕ ಹೇಳಿದರು. ಅವರು ಸೋಮವಾರ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ ಮೌಲಾನಾ ಅಬುಲ್ ಕಲಾಂರ ಜನ್ಮ ದಿನವನ್ನು ಶಿಕ್ಷಣದಿನವನ್ನಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೌಲಾನಾ ಅಬುಲ್ ಕಲಾಂರು ಅಸಹಕಾರ ಚಳವಳಿಯಲ್ಲಿ ಗಾಂಧೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿ ದೇಶದ ಸ್ವಾತಂತ್ರ್ಯಕ್ಕಾಗಿ ಸೇವೆ ಸಲ್ಲಿಸಿದ ಇವರು ರಾಜಕೀಯವಾಗಿ ಹಲವಾರು ಲೇಖನಗಳನ್ನು, ಗ್ರಂಥಗಳನ್ನು ರಚಿಸಿದವರು. ಸ್ವಾತಂತ್ರ್ಯ ನಂತರ ಪ್ರಥಮ ಶಿಕ್ಷಣ ಮಂತ್ರಿಯಾಗಿ ದಕ್ಷವಾಗಿ ಕಾರ್ಯನಿರ್ವಹಿಸಿದರು. 1948ರಲ್ಲಿ ವಿಶ್ವವಿದ್ಯಾಲಯ ಶಿಕ್ಷಣ ಆಯೋಗ, 1952ರಲ್ಲಿ ಸೆಕೆಂಡರಿ ಶಿಕ್ಷಣ ಆಯೋಗ, ಎಸ್. ರಾಧಾಕೃಷ್ಣರವರ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸ್ಥಾಪನೆಯಾಯಿತು. ಅನೇಕ ಮಹತ್ವದ ಸಂಸ್ಥೆ ಸ್ಥಾಪನೆ ಆಗಲು ಆಝಾದ್ರವರು ಮುಖ್ಯ ಕಾರಣರಾಗಿದ್ದಾರೆ ಎಂದರು. ಸಿ.ಎಂ. ಮಾರನಬಸರಿ ಮಾತನಾಡಿ, ಆಚರಣೆಗಳು ಕೇವಲ ಆಚರಣೆಗೆ ಸೀಮಿತವಾಗದೇ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ದಿನಾಚರಣೆಗಳು ಸಾರ್ಥಕ ಪಡೆದುಕೊಳ್ಳಲು ಸಾಧ್ಯ ಎಂದರು. ಶಿಕ್ಷಕ ಕೆ.ಎಂ. ಮೂಲಿಮನಿ ಸ್ವಾಗತಿಸಿ, ನಿರೂಪಿಸಿದರು. ಎಚ್.ಎಸ್. ಬ್ಯಾಳಿ ವಂದಿಸಿದರು.