ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಖಾಸಗೀಕರಣ ಖಂಡಿಸಿ ಪ್ರತಿಭಟನೆ

Lingaraj Badiger
Updated On : 12 Nov 2013, 11:15 am

ರೋಣ: ಬಿಸಿಯೂಟ ಖಾಸಗೀಕರಣ ವಿರೋಧಿಸಿ ಹಾಗೂ ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ರೋಣ ತಾಲೂಕು ಸಮಿತಿ ನೇತೃತ್ವದಲ್ಲಿ ಅಕ್ಷರ ದಾಸೋಹ (ಬಿಸಿಯೂಟ) ನೌಕರರು ಸೋಮವಾರ ಪ್ರತಿಭಟನೆ ನಡೆಸಿ, ತಾಪಂ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ದೇಶದ ಅಭಿವೃದ್ಧಿಗೆ ಪೂರಕವಾಗಿ ಪ್ರತಿಯೊಂದು ಮಗುವೂ ಶಿಕ್ಷಣ ಪಡೆಯಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದ್ದು ಶ್ಲಾಘನೀಯ. ಆದರೆ ಅದನ್ನು ಖಾಸಗೀಕರಣಗೊಳಿಸಲು ಹೊರಟಿರುವುದು ಖಂಡನಾರ್ಹವಾಗಿದೆ. ಇಂದು ಬಿಸಿಯೂಟ ನೌಕರರಿಗೆ ಕನಿಷ್ಠ ವೇತನವಿಲ್ಲದ್ದರಿಂದ ತೀವ್ರ ತೊಂದರೆಯಾಗುತ್ತಿದೆ. ಇಂದಿನ ತುಟ್ಟಿ ಕಾಲದಲ್ಲಿ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ. ಆದ್ದರಿಂದ ಸರ್ಕಾರ ಬಿಸಿಯೂಟ ನೌಕರರ ವಿವಿಧ ಬೇಡಿಕೆಗಳಿಗೆ ಸ್ಪಂದಿಸಿ ಅವರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಮಿತಿ ತಾಲೂಕು ಅಧ್ಯಕ್ಷೆ ಲತಾ ಬಡಿಗೇರ, ಕಾರ್ಯದರ್ಶಿ ಮಲ್ಲಮ್ಮ ಹುಲ್ಲಣ್ಣವರ ಮಾತನಾಡಿ, ಈಗಾಗಲೇ ಬಿಸಿಯೂಟ ಖಾಸಗೀಕರಣದಿಂದ 40 ಸಾವಿರ ಮಹಿಳೆಯರು ಕೆಲಸ ಕಳೆದುಕೊಂಡಿದ್ದಾರೆ.  ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಹಸ್ತಾಂತರಿಸಬಾರದು. ಹಾಜರಾತಿ ಆಧಾರದಲ್ಲಿ ಕಳೆದ 11 ವರ್ಷದಿಂದ ಕೆಲಸ ಮಾಡುತ್ತಿರುವ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕ್ರಮವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ತಾಪಂ ಇಒ ಅನುಪಸ್ಥಿತಿಯಲ್ಲಿ ಕಾರ್ಯಾಲಯದ ಸಿಬ್ಬಂದಿ ಬಿ.ಎಂ. ತುಗ್ಗಲದೊಣಿ ಅವರಿಗೆ ಮನವಿ ಸಲ್ಲಿಸಿದರು. ಅಕ್ಕಮ್ಮ ಕಣ್ಣೂರ, ಅನ್ನಪೂರ್ಣ ಮುಧೋಳ, ಬಿ.ಎಸ್. ಸಜ್ಜನ, ಎಂ.ವೈ. ಹಂಡಿ, ಗಿರಿಜಾ ಕಲ್ಯಾಣ, ಜಾನವ್ವ ಸುರಪುರ, ಈರಮ್ಮ ಬೆಲ್ಲದ, ದ್ರಾಕ್ಷಾಯಿಣಿ ಕಲ್ಲನಗೌಡ್ರ, ಎಂ.ಎಚ್. ತಾಂಬೋಟಿ, ಉಮಾ ಹಿರೇಮಠ, ಲೀಲಾ ಪತ್ತಾರ, ಅನಸವ್ವ ಈಟ್ಟೆನ್ನವರ, ಶೌಬೀರ ಅಮರಗೋಳ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement