ಯೋಜನೆ ಲಾಭ ಅರ್ಹ ಫಲಾನುಭವಿಗಳಿಗೆ ತಲುಪಲಿ
ಕನ್ನಡಪ್ರಭ ವಾರ್ತೆ, ರೋಣ, ನ. 11
ಬಡವರ, ನಿರ್ಗತಿಕರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ದಿಸೆಯಲ್ಲಿ ಪುರಸಭೆ ಅಧಿಕಾರಿಗಳು ಮತ್ತು ಸದಸ್ಯರ ಪಾತ್ರ ಪ್ರಮುಖವಾಗಿದೆ. ಯೋಜನೆಯ ಲಾಭ ಅರ್ಹ ಫಲಾನುಭವಿಗಳಿಗೆ ತಲುಪುವಂತಾಗಬೇಕು. ಅವ್ಯವಹಾರ ನಡೆಯದಂತೆ ಜಾಗೃತಿ ಅಗತ್ಯ ಎಂದು ಪುರಸಭೆ ಸದಸ್ಯರು ತೀರ್ಮಾನಿಸಿದರು.
ಸೋಮವಾರ ಪುರಸಭೆ ಸಭಾಭವನದಲ್ಲಿ ಎಸ್ಎಫ್ಸಿ ಮತ್ತು ಸಾಮಾನ್ಯ ನಿಧಿಯಲ್ಲಿ ಕಾಯ್ದಿರಿಸಿದ ಮೊತ್ತದಲ್ಲಿ ಶೇ. 22.75 ಮತ್ತು ಶೇ.7.25 ರ ಯೋಜನೆಯಡಿಯಲ್ಲಿ ಶಿಕ್ಷಣ, ಆರೋಗ್ಯ, ಗ್ಯಾಸ್, ಶೌಚಾಲಯ ಅರ್ಹ ಫಲಾನುಭವಿಗಳ ಶಿಫಾರಸು ಕುರಿತು ಜರುಗಿದ ತುರ್ತು ಸಭೆಯಲ್ಲಿ ಸದಸ್ಯರು ಈ ತೀರ್ಮಾನ ಕೈಗೊಂಡರು.
ಮಾತಿನ ಚಕಮಕಿ: ಎಸ್ಎಫ್ಸಿ ಶೇ. 22.75 ಯೋಜನೆಯಲ್ಲಿನ ಅನುದಾನವನ್ನು ಪಟ್ಟಣದಲ್ಲಿನ ಪ್ರತಿಯೊಂದು ವಾರ್ಡ್ಗೂ ವಿಭಾಗಿಸಬೇಕು ಎಂದು ವಿರೋಧ ಪಕ್ಷದ ಸದಸ್ಯ ಗದಿಗೆಪ್ಪ ಕಿರೇಸೂರ ಒತ್ತಾಯಿಸಿದಾಗ, ಅದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಮಂಜುನಾಥ ಹಾಳಕೇರಿ ಮಾತನಾಡಿ, ಯಾವ ವಾರ್ಡ್ನಲ್ಲಿ ಶೇ. 40ಕ್ಕೂ ಹೆಚ್ಚು ಎಸ್ಸಿ ಜನಾಂಗದವರಿರುತ್ತಾರೋ ಆ ವಾರ್ಡಿಗೆ ಮೊದಲು ಆದ್ಯತೆ ನೀಡಬೇಕು. ನಾನು ಒಬ್ಬ ದಲಿತ ಸಮುದಾಯ ಸದಸ್ಯನಾಗಿದ್ದು, ನನಗೆ ಇದರ ಬಗ್ಗೆ ಸರಿಯಾದ ಮಾಹಿತಿ ಇದೆ. ಈ ಅನುದಾನವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ಹಂಚಿಕೆ ಮಾಡಬೇಕು ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಮುತ್ತಣ್ಣ ಸಂಗಳದ ಅವರಿಗೆ ಒತ್ತಾಯಿಸಿದರು. ಆ ಸಂದರ್ಭದಲ್ಲಿ ಕೆಲಕಾಲ ಪರಸ್ಪರ ಸದಸ್ಯರ ನಡುವೆ ಮಾತಿನ ಚಕಮಕಿ ಜರುಗಿತು.
ಉರ್ದು ಶಾಲೆ ರಸ್ತೆ ಅಭಿವೃದ್ಧಿಪಡಿಸಿ: ಪಟ್ಟಣದ ಅಂಬೇಡ್ಕರ್ ನಗರದ ಹಿಂದೆ ಇರುವ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಉರ್ದು ಶಾಲೆಗೆ ತೆರಳುವ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಶಾಲಾ ಮಕ್ಕಳಿಗೆ ಮತ್ತು ಅಲ್ಲಿನ ಆಶ್ರಯ ನಿವಾಸಿಗಳಿಗೆ ನಿತ್ಯ ತೀವ್ರ ತೊಂದರೆಯಾಗುತ್ತದೆ. ಕೂಡಲೇ ದುರಸ್ತಿಗೊಳಿಸುವಂತೆ ಸಭೆಯ ಅಧ್ಯಕ್ಷರಿಗೆ ಸದಸ್ಯ ಮಂಜುನಾಥ ಹಾಳಕೇರಿ, ಖಾದರಸಾಬ್ ಸಂಕನೂರ, ಬಾಬುಸಾಬ ಚಿನ್ನೂರ ಒತ್ತಾಯಿಸಿದರು. ದಾರಿ ಇರುವ ಕುರಿತು ನಕ್ಷೆಯನ್ನು ತರಿಸಿ, ದಾರಿಯ ಪಕ್ಕದಲ್ಲಿ ಅತಿಕ್ರಮಣ ಮಾಡಿದ ಜಾಗೆಯನ್ನು ತೆರುವುಗೊಳಿಸಲು ನೋಟಿಸ್ ನೀಡಬೇಕು. ದಾರಿ ಎಷ್ಟಿದೆ ಎಂಬ ಮಾಹಿತಿ ನೀಡಿದಲ್ಲಿ ಅದನ್ನು ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಮುತ್ತಣ್ಣ ಸಂಗಳದ ತಿಳಿಸಿದರು.
ಕ್ರಿಯಾಯೋಜನೆಗೆ ಅನುಮೋದನೆ: 2013ನೇ ಸಾಲಿನಲ್ಲಿ ತಯಾರಿಸಲಾದ ಕ್ರಿಯಾಯೋಜನೆಗೆ ಸಭೆಯಲ್ಲಿ ಸರ್ವ ಸದಸ್ಯರು ಅನುಮೋದನೆ ಸೂಚಿಸಿದರು. 3ನೇ ವಾರ್ಡ್ನಲ್ಲಿ ಶೇ. 7.25ರ ಯೋಜನೆಯಡಿಯಲ್ಲಿ ರು. 62 ಸಾವಿರಗಳಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ, ಶೇ. 3 ಅನುದಾನದಲ್ಲಿ ರು. 25 ಸಾವಿರ ರುಗಳಲ್ಲಿ ಗುಲಗಂಜಿ ಮಠದ ಸ್ಮಶಾನದಲ್ಲಿ ನೀರಿನ ಟ್ಯಾಂಕ್ ನಿರ್ಮಿಸಲು ತಯಾರಿಸಿದ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಯಿತು. ಅಲ್ಲದೇ ಇನ್ನತರೆ ಯೋಜನೆಗಳು ಮತ್ತು ಮುಂಬರುವ ದಿನಗಳಲ್ಲಿ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ಮುಖ್ಯಾಧಿಕಾರಿ ಬಾಬುರಾವ್ ಕಮತರ, ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ, ಸದಸ್ಯ ಗದಿಗೆಪ್ಪ ಕಿರೇಸೂರ, ತೋಟಪ್ಪ ನವಲಗುಂದ, ಅಜ್ಜಪ್ಪ ರಡ್ಡೇರ, ಖಾದರಸಾಬ್ ಚಿನ್ನೂರ, ಶಿವಪ್ಪ ಲಿಂಗನಗೌಡ್ರ, ಗೀತಾ ಕೊಪ್ಪದ, ಗಂಗಮ್ಮ ಹಾದಿಮನಿ, ರತ್ನಾ ಕೊಳ್ಳಿ, ಶರಣಪ್ಪ ದೊಡ್ಡಮನಿ, ಬಸವರಾಜ ಬಸನಗೌಡ್ರ, ಸಮುದಾಯ ಸಂಘಟನಾಧಿಕಾರಿ ಎಸ್.ವೈ. ಸಂಕನಗೌಡ್ರ, ಐ.ಎಸ್. ಕೊಡ್ಲಿ ಮುಂತಾದವರು ಉಪಸ್ಥಿತರಿದ್ದರು.