ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿರಹಟ್ಟಿ: ಬಿಸಿಯೂಟ ನೌಕರರಿಂದ ಪ್ರತಿಭಟನೆ

Lingaraj Badiger
Updated On : 12 Nov 2013, 11:15 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 11
11 ವರ್ಷಗಳಿಂದ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಮಹಿಳೆಯರು ಯಾವುದೇ ಸೌಲಭ್ಯಗಳಿಲ್ಲದೇ ಕಡಿಮೆ ವೇತನದಲ್ಲಿ ಕೆಲಸ ಮಾಡುತ್ತಿದ್ದು, ತಕ್ಷಣವೇ ನಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸೋಮವಾರ ತಾಲೂಕು ಅಕ್ಷರ ದಾಸೋಹ ನೌಕರರು ಪಟ್ಟಣದ ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ, ನಂತರ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಅಕ್ಷರ ದಾಸೋಹ ಸಂಘಟನೆಯ ಅಧ್ಯಕ್ಷೆ ಪುಷ್ಪಾ ಚವ್ಹಾಣ, ರಾಜ್ಯ ಹಾಸ್ಟೇಲ್ ಮತ್ತು ವಸತಿ ಶಾಲಾ ನೌಕರ ಸಂಘದ ಸಹಕಾರ್ಯದರ್ಶಿ ಪಿ.ಡಿ. ರಾಠೋಡ ಮಾತನಾಡಿ, ರಾಜ್ಯದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನ ಅಡುಗೆ ಸಿಬ್ಬಂದಿ ಕನಿಷ್ಠ ವೇತನವೂ ಇಲ್ಲದೇ ದುಡಿಯುತ್ತಿದ್ದಾರೆ. ಶಾಲಾ ಮಕ್ಕಳಿಗೆ ನಿತ್ಯ ಗುಣಮಟ್ಟದ ಬಿಯೂಟವನ್ನು ತಯಾರಿಸಿ ಉಣ ಬಡಿಸುತ್ತಿದ್ದು, ಸರ್ಕಾರ ಇವರ ಬೇಡಿಕೆ ಈಡೇರಿಕೆಗೆ ಸ್ಪಂದಿಸಬೇಕು. ವೇತನ ಹೆಚ್ಚಳ ಮತ್ತು ಇನ್ನಿತರ ಸೂಕ್ತವಾದ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಳೆದ ಮೇ ತಿಂಗಳಲ್ಲಿ ಜರುಗಿದ 45ನೇ ಐಎಲ್‌ಸಿ (ಭಾರತೀಯ ಕಾರ್ಮಿಕ ಸಮ್ಮೇಳನ) ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುವ ಕಾರ್ಯಕರ್ತರಿಗೆ ಕನಿಷ್ಠ ಕೂಲಿ, ಸಾಮಾಜಿಕ ಭದ್ರತೆ ಮತ್ತು ಕೆಲಸದ ಭದ್ರತೆ ಒದಗಿಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಇದರ ಆಧಾರದ ಮೇಲೆ ಬಿಸಿಯೂಟ ನೌಕರರಿಗೆ ಕನಿಷ್ಠ 3 ಸಾವಿರ ವೇತನ ಜಾರಿ ಮಾಡಬೇಕು. ಬಿಸಿಯೂಟ ಯೋಜನೆ ಖಾಸಗೀಕರಣ ಮಾಡಬಾರದು. ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಯೋಜನೆಯ ಅಧಿಕಾರಿಗಳಿಗೆ ಮತ್ತು ಅಡುಗೆ ಸಿಬ್ಬಂದಿಗೆ ನೀಡಬೇಕು. ಕೇಂದ್ರ ಸರ್ಕಾರ ಜನಶ್ರೀ ಯೋಜನೆ ಜಾರಿ ಮಾಡಬೇಕು. ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಬರಗಾಲ ಮತ್ತು ವಿಶೇಷ ರಜಾ ದಿನಗಳಲ್ಲಿ ಕೆಲಸ ಮಾಡಿದರೆ ಹೆಚ್ಚಿನ ವೇತನ ನೀಡಬೇಕು. ಪ್ರತಿ ತಿಂಗಳು ಮೊದಲ ವಾರದಲ್ಲಿ ವೇತನ ನೀಡಬೇಕು.
ಶಿಕ್ಷಕರಿಗೆ ನೀಡುವ ಹಾಗೆ ಬೇಸಿಗೆ ರಜೆ, ವೇತನವನ್ನು ನೀಡಬೇಕು. ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಪತ್ರ ನೀಡಬೇಕು. ಬಿಸಿಯೂಟದ ಮಹಿಳೆಯರಿಗೆ ಬಿಪಿಎಲ್ ಪಡಿತರ ಚೀಟಿ ನೀಡಬೇಕು. ಅಡುಗೆ ತಯಾರು ಮಾಡುವ ಸಂದರ್ಭದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ಪರಿಹಾರ ನೀಡಬೇಕು. ತಕ್ಷಣವೇ ಬೇಡಿಕೆ ಈಡೇರಿಕೆಗೆ ಕ್ರಮ ಕೈಗೊಳ್ಳದಿದ್ದರೆ ಅನಿರ್ದಿಷ್ಟ ಹೋರಾಟಕ್ಕೆ ಮುಂದಾಗುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ವೈ.ಎಲ್. ಹಂಪಣ್ಣ ಮನವಿ ಸ್ವೀಕರಿಸಿ ಮಾತನಾಡಿ, ಬಿಸಿಯೂಟ ನೌಕರರ ಬೇಡಿಕೆ ಈಡೇರಿಸುವ ಕುರಿತು ನೀಡಿದ ಮನವಿಯನ್ನು ಸಿಇಒ ಅವರಿಗೆ ಕಳುಹಿಸುವುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ಅನ್ನಪೂರ್ಣಾ ಮಡಿವಾಳರ, ಎಸ್.ಎಸ್. ಜಾಲಿಹಾಳ, ಸಾವಿತ್ರಿ ಬಡಿಗೇರ, ಕೆ.ಎಲ್. ಬಳ್ಳಾರಿ, ಗೀತಾ ಬಂಡಿವಡ್ಡರ, ಗೀತಾ ಟೆಂಕೆಪ್ಪನವರ, ಎಸ್.ಐ. ಗೋಬಿ, ಸಿ.ಕೆ. ಪೂಜಾರ, ಎಸ್.ವಿ. ಮುಧೋಳಕರ, ಪಿ.ಆರ್. ದೊಡ್ಡಮನಿ, ಲಕ್ಷ್ಮವ್ವ ಕಂಬಾರ, ಈರಮ್ಮ ಶೆಟ್ಟನಗೌಡ್ರ, ಎಸ್.ಪಿ. ಬೆಳವಟಗಿ, ಶಶಿಕಲಾ ಈಳಗೇರ, ಜಿ.ಬಿ. ಭಜಂತ್ರಿ, ಶಕುಂತಲಾ ಚಿಂಚಲಿ, ದಾವಲಬಿ ವಾಲಿಕಾರ, ಎಚ್.ಎಫ್. ದೊಡ್ಡಮನಿ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement