ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿಗೆ ಹಳ್ಳಿಕೇರಿಮಠ ಆಯ್ಕೆ
ಗದಗ: 58ನೇ ಕನ್ನಡ ರಾಜ್ಯೋತ್ಸವ ಹಾಗೂ ಭಾರತ ವೀರರಾಣಿ ಚನ್ನಮ್ಮ, ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ ಸರ್ವಧರ್ಮ ಜನ ಜಾಗೃತಿ ರಥೋತ್ಸವದ ಅಂಗವಾಗಿ ರಾಣಿ ಚೆನ್ನಮ್ಮ ನವಭಾರತ ಸೇನೆ ಬೆಂಗಳೂರು, ಕರ್ನಾಟಕ ರಕ್ಷಣಾ ಸೇನೆ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಒಕ್ಕೂಟದಿಂದ ಕೊಡಮಾಡುವ ಕ್ರಾಂತಿಕಾರಿ ವೀರ ಸಂಗೊಳ್ಳಿ ರಾಯಣ್ಣ ಶೌರ್ಯ ಪ್ರಶಸ್ತಿಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಶಿರೂರ ಗ್ರಾಮದ ಜನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರನ್ನು ಆಯ್ಕೆಮಾಡಲಾಗಿದೆ. ನಾಡಿನ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಗದಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಚಲನ ಚಿತ್ರನಟ ದರ್ಶನ, ಉದ್ಯಮಿ ಪ್ರಭಾಕರ ರೆಡ್ಡಿ, ಪವಾಡ ಬಯಲು ಖ್ಯಾತಿಯ ಹುಲಿಕಲ್ಲ ನಟರಾಜ ಸೇರಿದಂತೆ ರಾಜ್ಯದ 20 ಸಾಧಕರನ್ನು ಆಯ್ಕೆಮಾಡಲಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭವು ಬೆಂಗಳೂರಿನ ಫ್ರೀಡ್‌ಂ ಪಾರ್ಕ್‌ನಲ್ಲಿ ನ. 16 ರಂದು ಜರುಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಸಚಿವ ಹಾಗೂ ನಟ ಅಂಬರೀಷ, ಶಾಮನೂರ ಶಿವಶಂಕ್ರಪ್ಪ, ಉಮಾಶ್ರೀ, ಸತೀಶ ಜಾರಕಿಹೊಳಿ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ ಬಿದರಿ ಸೇರಿದಂತೆ ನಾಡಿನ ಸಾಹಿತಿಗಳು ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ನವಭಾರತ ಸೇನೆಯ ರಾಜ್ಯಾಧ್ಯಕ್ಷ ಕೆ. ನಜೀರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಕಥಾಕೀರ್ತನ
ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಯಕಲಾಸಪುರದ ಅಮರೇಶ್ವರ ದೇವಸ್ಥಾನದಲ್ಲಿ ನ. 12ರ ಸಂಜೆ 7 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಮರೇಶ್ವರ ದೇವಸ್ಥಾನ ಯಕಲಾಸಪುರ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಯೋಜನೆಯ ಅಡಿಯಲ್ಲಿ ಕಥಾಕೀರ್ತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಳಗಾನೂರಿನ ಚಿಕೇನುಕೊಪ್ಪದ ಶಿವಶಾಂತವೀರ ಶ್ರೀಗಳು ಸಾನ್ನಿಧ್ಯ ವಹಿಸುವರು. ಶರಣಬಸವ ಶಾಸ್ತ್ರೀ ಹಿರೇಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.
ಕರಬಸಪ್ಪ ನಿಧನ
ಮುಂಡರಗಿ: ಪಟ್ಟಣದ ಕರಬಸಪ್ಪ ಕುಂಬಾರಗೇರಿ (74) ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ. ಮೃತರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಇದ್ದಾರೆ. ಮೃತರು ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿ ಅನಂತರ ವಿವಿಧ ದಿನಪತ್ರಿಕೆಗಳ ವಿತರಕರಾಗಿಯೂ ಕೆಲಸ ಮಾಡಿದ್ದಾರೆ. ಕರಬಸಪ್ಪ ಕುಂಬಾರಗೇರಿ ನಿಧನಕ್ಕೆ ಶಾಸಕ ರಾಮಕೃಷ್ಣ ದೊಡ್ಡಮನಿ, ಕರಬಸಪ್ಪ ಹಂಚಿನಾಳ, ವೈ.ಎನ್. ಗೌಡರ, ಕೊಟ್ರೇಶ ಅಂಗಡಿ, ಈಶಣ್ಣ ಬೆಟಗೇರಿ, ಧ್ರುವಕುಮಾರ ಹೊಸಮನಿ, ಪತ್ರಕರ್ತರು ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.