ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

2035 ಆಟದ ಮೈದಾನ ನಿರ್ಮಾಣ

Lingaraj Badiger
Updated On : 13 Nov 2013, 10:40 am

ಗದಗ: ರಾಜ್ಯದ 30 ಜಿಲ್ಲೆ ವ್ಯಾಪ್ತಿಯ 2035 ಗ್ರಾಮಗಳಲ್ಲಿ ನವೆಂಬರ್ 14 ರಂದು ಆಟದ ಮೈದಾನಗಳ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಳೆದ ಅಕ್ಟೋಬರ್ 26 ರಂದು ಮೈಸೂರನಲ್ಲಿ ಎಸ್‌ಐಆರ್‌ಡಿ ಸಂಸ್ಥೆಯ ಮೂಲಕ ಬಹೃತ್ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ 15 ಅಂಶಗಳ ಕಾರ್ಯಕ್ರಮದಡಿ ಇದನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಒಟ್ಟು ರು. 100 ಕೋಟಿ ಯೋಜನೆಯಾಗಿದ್ದು, ರಾಜ್ಯಾದ್ಯಂತ ಒಟ್ಟು 10 ಸಾವಿರ ಆಟದ ಮೈದಾನಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.
ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 2 ಆಟದ ಮೈದಾನಗಳ ನಿರ್ಮಾಣಕ್ಕೆ ಚಿಂತನೆ ನಡೆಸುವ ಮೂಲಕ ಯುವ ಪೀಳಿಗೆಗೆ ಕ್ರೀಡಾ ಮೂಲ ಸೌಲಭ್ಯ ಒದಗಿಸಿ, ದೇಶೀ ಕ್ರೀಡೆಗಳಾದ ಕಬಡ್ಡಿ, ಖೋಖೋ, ಮಲ್ಲಕಂಬ ಹಾಗೂ ಅಟ್ಯಾಪಟ್ಯಾ ಕ್ರೀಡೆಗೆ ಆದ್ಯತೆ ದೊರೆಯಲಿದೆ. ಈ ಯೋಜನೆಗೆ ಎನ್‌ಆರ್‌ಜಿಎ, 13ನೇ ಹಣಕಾಸು ಹಾಗೂ ಶಾಸಕ ಮತ್ತು ಸಂಸದರ ನಿಧಿಯಿಂದ ಹಣ ಬಳಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಂದು ಗದಗ ಜಿಲ್ಲೆಯಲ್ಲಿ ಒಟ್ಟು 283 ಸ್ಥಳಗಳಲ್ಲಿ ಆಟದ ಮೈದಾನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಇವುಗಳಲ್ಲಿ 121 ಗ್ರಾಮ ಮಟ್ಟದಲ್ಲಿ ಹಾಗೂ ಇದೇ ಯೋಜನೆಯಡಿ 162 ಶಾಲಾ ಮೈದಾನಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದ್ದು, ನೀಲ ನಕ್ಷೆ ಅಂದಾಜು ಪಟ್ಟಿ ಸಿದ್ದವಾಗಿದ್ದು, ಈಗಾಗಲೇ ಈ ಕಾರ್ಯಕ್ಕೆ ಬೇಕಾಗುವ ಹಣಕಾಸಿನ ನೆರವು ಹಂಚಿಕೆ ಮಾಡಲಾಗಿದೆ. 2 ತಿಂಗಳ ಕಾಲ ಮಿತಿಯಲ್ಲಿ ಕಾರ್ಯ ಪೂರ್ಣಗೊಳಿಸುವ ಮೂಲಕ ಜನವರಿ 12 ರಂದು ನಡೆವ ವಿವೇಕಾನಂದ ಜಯಂತಿ ವೇಳೆಗೆ ಎಲ್ಲ 283 ಮೈದಾನಗಳ ನಿರ್ಮಾಣ ಕಾರ್ಯ ಪೂರ್ತಿಗೊಳಿಸುವ ಗುರಿ ಹೊಂದಲಾಗಿದೆ. ಈಗಾಗಲೇ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ಮಾದರಿ ಆಟದ ಮೈದಾನ ಸಿದ್ಧಗೊಂಡಿದ್ದು, ನ. 14 ರಂದು ಈ ಮೈದಾನವನ್ನು ಉದ್ಘಾಟಿಸುವ ಮೂಲಕ ರಾಜ್ಯಾದ್ಯಂತ ಯೋಜನೆಗೆ ಚಾಲನೆ ದೊರೆಯಲಿದೆ ಎಂದರು. ಈ ಸಂದರ್ಭದಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement