ಕನಕದಾಸ ಜಯಂತಿ: ಎಲ್ಲರೂ ಪಾಲ್ಗೊಳ್ಳಿ
ರೋಣ: ನ. 20ರಂದು ಜರುಗಲಿರುವ ಸಂತ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ ಅದೊಂದು ಸಾರ್ವಜನಿಕರ ಕಾರ್ಯಕ್ರಮವಾಗಬೇಕು. ಎಲ್ಲ ಸಮಾಜದವರೂ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಎ.ಜಿ. ಪಂಡಿತ್ ಹೇಳಿದರು. ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಭವನದಲ್ಲಿ ಮಂಗಳವಾರ ನಡೆದ ಸಂತ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ. 20ರಂದು ಬೆಳಗ್ಗೆ 10 ಗಂಟೆಗೆ ಪಟ್ಟಣದ ಸಿದ್ಧಾರೂಢ ಮಠದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಆರಂಭವಾಗಲಿದೆ. ಮಧ್ಯಾಹ್ನ 1.30ಕ್ಕೆ ಹಳೇ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಕಾರ್ಯಕ್ರಮ ಜರುಗಲಿದೆ. ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿವರಿಸಿದರು.
ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಪುರಸಭೆ ಮಾಜಿ ಸದಸ್ಯ ಸುರೇಶ ಜಗ್ಗಲ ಮುಂತಾದವರು ಮಾತನಾಡಿದರು. ಸಭೆಯಲ್ಲಿ ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಬಿಇಓ ಡಿ.ಐ. ಅಸೂಂಡಿ, ದೈಹಿಕ ಶಿಕ್ಷಣಾಧಿಕಾರಿ ಎಸ್.ವೈ. ಯಡಳ್ಳಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಎಸ್.ಪಿ. ಕಾಶಪ್ಪನವರ, ಎಸ್.ಎಂ. ಮುದೋಳ, ಪುರಸಭೆ ಮುಖ್ಯಾಧಿಕಾರಿ ಬಾಬುರಾವ್ ಕಮತರ, ಸಿ.ಎ. ಕೋರಿ, ಅಶೋಕ ಕಣ್ಣೂರ, ಪಿಎಸ್ಐ ಡಿ.ಬಿ. ಪಾಟೀಲ್, ಎಸ್.ಆರ್. ದೊಡ್ಡಮನಿ, ತಾಪಂ ಸದಸ್ಯೆ ಗಾಯತ್ರಿ ನಾಗನೂರ, ಎಂ.ಎಂ. ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.