ಟಿಸಿ ಅಳವಡಿಸಲು ರೈತರ ಆಗ್ರಹ
ಕನ್ನಡಪ್ರಭ ವಾರ್ತೆ, ಗದಗ, ನ. 12
ಜಿಲ್ಲೆಯ ಶಿರಹಟ್ಟಿ ತಾಲೂಕಿನ ಸುಗನಹಳ್ಳಿ ಗ್ರಾಮದ ರೈತರು ಈಗಿರುವ 63 ಕಿ.ವ್ಯಾಟ್ ಬದಲಾಗಿ 100 ಕಿ. ವ್ಯಾಟ್ ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಆಗ್ರಹಿಸಿ ಮಂಗಳವಾರ ಹೆಸ್ಕಾಂ ವಿಭಾಗಾಧಿಕಾರಿ ಕೆ.ಎಸ್. ಮುಕ್ಕಣ್ಣಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈಗಾಗಲೇ ಸುಗನಹಳ್ಳಿಯಲ್ಲಿರುವ ದಾನಪ್ಪ ರಾಹುತ ಅವರ ಹೊಲದಲ್ಲಿ 63 ಕಿ.ವ್ಯಾ. ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್ ಅಳವಡಿಸಲಾಗಿದ್ದು, ಇದರಲ್ಲಿ ಅಕ್ರಮ-ಸಕ್ರಮ ಹಾಗೂ ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳು ಸೇರಿದಂತೆ ಸುಮಾರ 20ಕ್ಕೂ ಹೆಚ್ಚು ಸಂಪರ್ಕಗಳಿರುವುದರಿಂದ ಕಡಿಮೆ ಪ್ರಮಾಣದಿಂದ ಕೂಡಿರುವ ಈ ಟ್ರಾನ್ಸ್‌ಫಾರ್ಮರ ಹಾಗೂ ಮೋಟಾರ್‌ಗಳು ಸುಡುತ್ತಿವೆ. ಇದರಿಂದಾಗಿ ಸುತ್ತಮುತ್ತಲಿನ ರೈತರಿಗೆ ತೀವ್ರ ತರದ ವಿದ್ಯುತ್ ತೊಂದರೆಯಾಗುತ್ತಿದೆ. ಇನ್ನು ಕೆಲ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ವಿದ್ಯುತ್ ದೊರೆಯುವುದರಿಂದ ಬೆಳೆಗಳಿಗೆ ನೀರು ಸಾಲದಿರುವ ಪರಿಣಾಮ ಬೆಳೆಗಳು ಒಣಗುತ್ತಿವೆ. ಇದರಿಂದಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.
ಸದ್ಯ ಈಗಿರುವ 63 ಕಿವ್ಯಾ ಟ್ರಾನ್ಸ್‌ಫಾರ್ಮರ್ ಬದಲಾಯಿಸಿ 100 ಕಿವ್ಯಾ ಸಾಮರ್ಥ್ಯದ ಟಿಸಿ ಅಳವಡಿಸಬೇಕು ಅಥವಾ ಹೆಚ್ಚುವರಿಯಾಗಿ ಇನ್ನೊಂದು 63 ಕಿವ್ಯಾ ಟಿಸಿ ಅಳವಡಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಿಭಾಗಾಧಿಕಾರಿ ಕೆ.ಎಸ್. ಮುಕ್ಕಣ್ಣಯ್ಯ ರೈತರು ನೀಡಿದ ಮನವಿ ಸ್ವೀಕರಿಸಿ ಮಾತನಾಡಿ, ಅಕ್ರಮ ಸಕ್ರಮ ಅಡಿಯಲ್ಲಿ ಹಾಗೂ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ದೇವಪ್ಪ ರಾಹುತರ, ಎನ್.ವೈ. ಓಲೇಕಾರ, ಎಂ.ಆರ್.ಅಂಗಡಿ, ಎ.ಜಿ. ಅಂಗಡಿ, ಸಿ.ಪಿ. ಸಕ್ಕಲಿ, ಶಂಕರಪ್ಪ ರಾಹುತರ, ಸಿ.ಡಿ. ಜೈನರ್, ಎಸ್.ಎಂ. ಬದಾಮಿ, ಐ.ಬಿ. ಬಾವನೂರ, ಎಸ್.ಜಿ. ಬದಾಮಿ, ಎಸ್.ಎನ್.ಪಾಟೀಲ, ಬಸವರಾಜ ಶಿರಹಟ್ಟಿ, ನಾಗರಾಜ ಬೀರಪ್ಪನವರ, ಅನಂತಗೌಡ ಪಾಟೀಲ, ಎಂ.ಜಿ. ಕಮ್ಮಾರ, ಉಮೇಶ ಬಳ್ಳಾರಿ ಹಾಜರಿದ್ದರು.