ನಾಳೆ ಮಹಾವಿದ್ಯಾಲಯ ನವೀಕರಣ ಸಮಾರಂಭ
ಗದಗ: ನಗರಸಭೆ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಹಾಗೂ ಪ್ರೌಢಶಾಲೆಗಳ ಕಟ್ಟಡಗಳು ಬಹುವರ್ಷಗಳ ನಂತರ ನವೀಕೃತಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭ ನ. 14ರ ಮಧ್ಯಾಹ್ನ 4 ಗಂಟೆಗೆ ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ವೆಂಕಟೇಶ ಕಟ್ಟಿಮನಿ ಹೇಳಿದರು. ಅವರು ನಗರದ ಮುನ್ಸಿಪಲ್ ಕಾಲೇಜಿನ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸುಮಾರು 128 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಪ್ರೌಢಶಾಲೆ ಹಾಗೂ 56 ವರ್ಷ ಇತಿಹಾಸ ಹೊಂದಿರುವ ಕಾಲೇಜಿನ ಹಲವಾರು ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದವು. ಈ ಹಿನ್ನೆಲೆಯಲ್ಲಿ ನಗರಸಭೆ ಜಿಲ್ಲಾಡಳಿತ ಹಾಗೂ ಕಾಲೇಜಿನ ಸಂಚಿತ ನಿಧಿ ಸೇರಿದಂತೆ ರು. 44 ಲಕ್ಷ ವೆಚ್ಚದಲ್ಲಿ ನವೀಕರಣ ಕಾರ್ಯ ಮಾಡಲಾಗಿದೆ. ಇದರಿಂದಾಗಿ ಮುಂದಿನ 50 ವರ್ಷದ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿದೆ ಎಂದರು. ಸಚಿವ ಎಚ್.ಕೆ. ಪಾಟೀಲ ಉದ್ಘಾಟಿಸುವರು. ಜ. ತೋಂಟದ ಡಾ. ಸಿದ್ಧಲಿಂಗ ಶ್ರೀ ಸಾನ್ನಿಧ್ಯ ವಹಿಸುವರು. ಮಾಜಿ ಶಾಸಕ ಡಿ.ಆರ್. ಪಾಟೀಲ ಶಾಲಾ ಸಂಸತ್ ಉದ್ಘಾಟಿಸುವರು. ಅತಿಥಿಗಳಾಗಿ ದಾವಣಗೆರೆ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ತುರಮುರಿ ಆಗಮಿಸಲಿದ್ದಾರೆ. ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಅಧ್ಯಕ್ಷತೆ ವಹಿಸುವರು. ನಗರಸಭೆಯ ಶಿಕ್ಷಣ ಹಾಗೂ ಸ್ಥಾಯಿ ಸಮಿತಿಯ ಮಾಜಿ ಚೇರಮನ್ ಲಕ್ಷ್ಮೀದೇವಿ ಕಟ್ಟಿಮನಿ, ಸದಾನಂದ ಪಿಳ್ಳೆ, ಪರಶುರಾಮ ಹೆಬಸೂರ, ಸಿದ್ಧು ಪಲ್ಲೇದ ಆಗಮಿಸಲಿದ್ದಾರೆ ಎಂದರು. ಪ್ರೊ. ಅನ್ನದಾನಿ ಹಿರೇಮಠ, ಕೆ.ಎಸ್. ಬಡಿಗೇರ, ಉದಯಸಿಂಗ್ ಬ್ಯಾಳಿ, ಆರ್. ಈಶ್ವರಶೆಟ್ಟಿ, ಬಿ.ಬಿ. ಗಾಯಕಾವಡ, ಎನ್.ಎಂ. ಕಬಾಡಿ, ಎ.ಪಿ. ಪುರೋಹಿತ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಶಂಕ್ರಪ್ಪ ಸಂಗಪ್ಪಶೆಟ್ಟರ್ ನಿಧನ
ಶಿರಹಟ್ಟಿ: ಪಟ್ಟಣದ ಶೆಟ್ಟರ ಓಣಿಯ ನಿವಾಸಿ ಶಂಕ್ರಪ್ಪ ಸಂಗಪ್ಪಶೆಟ್ಟರ (83) ಮಂಗಳವಾರ ನಿಧನರಾದರು. ಮೃತರಿಗೆ ಪತ್ನಿ, ಮೂವರು ಪುತ್ರರು, ಮೂವರು ಪುತ್ರಿಯರು, ಓರ್ವ ಸಹೋದರ ಇದ್ದರು. ಇವರ ನಿಧನಕ್ಕೆ ಜ. ಫಕೀರ ಸಿದ್ಧರಾಮ ಶ್ರೀಗಳು, ಶಾಸಕ ರಾಮಕೃಷ್ಣ ದೊಡ್ಡಮನಿ, ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ, ವೈ.ಎಸ್. ಪಾಟೀಲ, ಡಿ.ಎನ್. ಡಬಾಲಿ, ಚಂದ್ರಕಾಂತ ನೂರಶೆಟ್ಟರ, ಶಿವಪ್ರಕಾಶ ಮಹಾಜನಶೆಟ್ಟರ, ರಾಮಣ್ಣ ಡಂಬಳ, ಎಚ್.ಡಿ. ಮಾಗಡಿ ಸಂತಾಪ ಸೂಚಿಸಿದ್ದಾರೆ.