ಸ್ವಚ್ಛತಾ ಅಭಿಯಾನಕ್ಕೆ ಸಹಕರಿಸಿ
ಗದಗ: ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರ ಮಾರ್ಗದರ್ಶನದಲ್ಲಿ ಗದಗ-ಬೆಟಗೇರಿ ನಗರದಲ್ಲಿ ಸ್ವಚ್ಛತಾ ಅಭಿಯಾನ ಆರಂಭಗೊಂಡಿದ್ದು, 12ನೇ ವಾರ್ಡಿನ ಸಮಸ್ತ ನಾಗರಿಕರು ಈ ಅಭಿಯಾನಕ್ಕೆ ಸಹಕರಿಸಿ ಯಶಸ್ವಿಗೊಳಿಸಬೇಕೆಂದು 12ನೇ ವಾರ್ಡಿನ ನಗರಸಭೆ ಸದಸ್ಯ ಶ್ರೀನಿವಾಸ ಹುಯಿಲಗೋಳ ಹೇಳಿದರು.
ನಗರದ 12ನೇ ವಾರ್ಡಿನ ವಿವೇಕಾನಂದ ರಸ್ತೆಯ ಶಾದಿ ಮಹಲ್‌ನಲ್ಲಿ ನಡೆದ 12ನೇ ವಾರ್ಡಿನ ಹಿರಿಯರ ಹಾಗೂ ಸಾಮಾಜಿಕ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ನ. 10ರಿಂದ ನಗರದಲ್ಲಿ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಿದ್ದು, ತನ್ನಿಮಿತ್ತ ವಾರ್ಡಿನಲ್ಲಿರುವ ಕಸವಿಲೇವಾರಿ, ಚರಂಡಿಗಳನ್ನು ಸ್ವಚ್ಛಗೊಳಿಸಿ, ಹೂಳನ್ನು ಸಾಗಿಸಿ ನೀರು ಸರಾಗವಾಗಿ ಹರಿದುಹೋಗುವಂತೆ ಮಾಡುವುದು, ಬೀದಿ ದೀಪಗಳನ್ನು ಅವಶ್ಯವಿದ್ದಲ್ಲಿ ಅಳವಡಿಸುವುದು ಮತ್ತು ದುರಸ್ತಿಗೊಳಿಸುವುದು. ಸಾರ್ವಜನಿಕರಿಗೆ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಎಲ್ಲ ಕಾರ್ಯಕ್ರಮಗಳಲ್ಲಿ ವಾರ್ಡಿನ ಪ್ರಮುಖರು, ಯುವಕರು ಸಕ್ರಿಯವಾಗಿ ಪಾಲ್ಗೊಂಡು, ಸಲಹೆ, ಸೂಚನೆ ಹಾಗೂ ಸಹಕಾರ ನೀಡಬೇಕೆಂದು ವಿನಂತಿಸಿದರು.
ನಗರಸಭೆಯ ಮಾಜಿ ಅಧ್ಯಕ್ಷ ಡಾ. ಆರ್.ಎನ್. ಗೋಡಬೋಲೆ, ಬರದೂರ, ಸಾಮಾಜಿಕ ಕಾರ್ಯಕರ್ತೆ ನಿರ್ಮಲಾ ಜೋಶಿ ಮಾತನಾಡಿ, ವಾರ್ಡಿನ ಸ್ವಚ್ಛತೆ, ರಸ್ತೆ ನಿರ್ಮಾಣ ಕಸ ವಿಲೇವಾರಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮುಂತಾದ ವಿಷಯಗಳ ಕುರಿತು ಸಲಹೆ ನೀಡಿದರು. ಸಭೆಯಲ್ಲಿ ಡಾ. ಅನಂತ ಶಿವಪುರ, ವಿಶ್ವಾರಾಧ್ಯ ಸ್ವಾಮೀಜಿ, ಎನ್.ಬಿ. ಕಳಸಾಪುರ, ಪರಶುರಾಮ, ಸುಮಾ ಗರಗ, ಮಾಧವ ಕುಲಕರ್ಣಿ, ಎಲ್.ಎಚ್. ಕರಡಿ, ಉಪ್ಪಿನ, ಉಮಚಗಿ, ಹಾದಿಮನಿ, ಸುಧೀಶ ಶಿವಪುರ, ಎಸ್.ಎಚ್. ಕರಡಿ, ವಿಜಯಕುಮಾರ ಬೆಳಗಲಿ, ಚಂದ್ರು ಹಿರೇಮಠ, ಎಂ.ಸಿ. ನಾಶಿ, ಬಣ್ಣದ ಭಾವಿ, ದಾಸ್, ರಾಜಗೋಪಾಲಚಾರ್ ಮಳಗಿ, ವಿಲ್ಸನ್, ರೋನಲ್, ಟೋನಿ, ದತ್ತಪ್ರಸನ್ನ ಪಾಟೀಲ, ಎಂ.ಆರ್. ಹೆಬ್ಬಳ್ಳಿ, ಬಾಬಣ್ಣ, ಗೋಟುರ, ಪೀಟರ್ ಜೋಸೆಫ್ ಮುಂತಾದವರು ಪಾಲ್ಗೊಂಡಿದ್ದರು. ಪನಮನಹಳ್ಳಿ ನಿರೂಪಿಸಿ ವಂದಿಸಿದರು.
--
ಮುಂಡರಗಿ: ನಿಗಮ ಮಂಡಳಿಗೆ ನೇಮಕಕ್ಕೆ ಆಗ್ರಹ
ಮುಂಡರಗಿ: ನಿಗಮ ಮಂಡಳಿಗೆ ಮೋಚುಗಾರ ಸಮಾಜದ ಬಸವರಾಜ ರಾಮೇನಹಳ್ಳಿ ಅವರನ್ನು ನೇಮಕ ಮಾಡಬೇಕು ಎಂದು ಅಸ್ಪಶ್ಯರ ವಿಮೋಚನಾ ಸಮಿತಿ ರಾಜ್ಯಾಧ್ಯಕ್ಷ ರಾಮಚಂದ್ರ ಗಾರವಾಡ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಮೂಲ ಅಸ್ಪೃಶ್ಯ ಸಮುದಾಯದ ಒಂದು ಭಾಗವಾದ ಮೋಚಿಗಾರ ಸಮಾಜಕ್ಕೆ ಸ್ವಾತಂತ್ರ್ಯ ನಂತರ ಆರೂವರೆ ದಶಕದಿಂದ ಸ್ಥಾನ ನೀಡದಿರುವುದು ವಿಷಾದನೀಯ. ಕಾಂಗ್ರೆಸ್ ನಿಷ್ಠಾವಂತ ಕಾರ್ಯಕರ್ತರಿಗೆ ನಿಗಮ ಮಂಡಳಿ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ. ಸಮಿತಿ ರಾಜ್ಯ ಉಪಾಧ್ಯಕ್ಷ ಕೆ. ಲಕ್ಷ್ಮಣ, ಬಸವರಾಜ ರಾಮೇನಹಳ್ಳಿ, ಸುರೇಶ ನಾಯ್ಕ, ರಾಮು ಭಜಂತ್ರಿ, ಅಬ್ದುಲ್ ಗಫಾರ್ ಔರಂಗ್, ಹನುಮಂತಪ್ಪ ದೊಡ್ಡಮನಿ ಒತ್ತಾಯಿಸಿದ್ದಾರೆ.