16ರಂದು ಜಯಮೃತ್ಯುಂಜಯ ಶ್ರೀಗಳಿಗೆ ತುಲಾಭಾರ: ಮದ್ನೂರ
ಗದಗ: ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳಿಗೆ ಗದಗ ಜಿಲ್ಲೆಯಿಂದ ಪ್ರಥಮ ತುಲಾಭಾರ ಕಾರ್ಯಕ್ರಮವನ್ನು ನ. 16 ರಂದು ಸಂಜೆ 6 ಗಂಟೆಗೆ ತಾಲೂಕಿನ ಅಂತೂರ-ಬೆಂತೂರು ಗ್ರಾಮದ ಅನ್ನದಾನೀಶ್ವರ ಮಠದಲ್ಲಿ ನಡೆಸಲಾಗುವುದು ಎಂದು ಪಂಚಮಸಾಲಿ ಸಮಾಜದ ಅಂತೂರು ಬೆಂತೂರು ಗ್ರಾಮಘಟಕದ ಅಧ್ಯಕ್ಷ ವೀರೇಶ ಮದ್ನೂರು ಹೇಳಿದರು. ಅವರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ಪ್ರಭಣ್ಣ ಹುಣಸಿಕಟ್ಟಿ ವಹಿಸುವರು. ಅತಿಥಿಗಳಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕೋಶಾಧ್ಯಕ್ಷ ಎಸ್.ಎಂ. ಪಾಟೀಲ, ಸಂಚಾಲಕ ಎಂ.ಎಸ್. ಮಲ್ಲಾಪುರ, ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಗದಗ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಸಪ್ಪ, ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಅಂಗಡಿ, ಗದಗ ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ಎಸ್. ಚಿನ್ನೂರು, ಯುವ ಜಿಲ್ಲಾ ಘಟಕದ ಅಧ್ಯಕ್ಷ ಇ.ವೈ. ಮರೀಗೌಡ್ರ, ತಾಲೂಕು ಘಟಕದ ಅಧ್ಯಕ್ಷ ಚಂದ್ರಣ್ಣ ಹುಣಸಿಕಟ್ಟಿ, ಶಹರ ಘಟಕದ ಅಧ್ಯಕ್ಷ ಎಂ.ಎಸ್.ಪಾಟೀಲ, ಮುದುಕಪ್ಪ ಹೋಳಿ, ಬೆಟಗೇರಿ ಘಟಕದ ಕಾರ್ಯದರ್ಶಿ ಮಹೇಶ ಕರಿಬಿಷ್ಠಿ ಆಗಮಿಸುವರು.
ಪಂಚಮಸಾಲಿ ಸಮಾಜದಲ್ಲಿ ಸಾಧನೆ ಮಾಡಿದ ಡಾ. ವಿಶ್ವನಾಥ ಕುಲಕರ್ಣಿ, ಬಸವರಾಜ ಸಿದ್ಧಗೊಣ್ಣವರ ಮತ್ತು ಪ್ರತಿಭಾವಂತ ವಿದ್ಯಾರ್ಥಿ ಸ್ವರೂಪ ಮದ್ನೂರು ಅವರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ. ಅಂದು ಕಾರ್ಯಕ್ರಮದ ಪೂರ್ವದಲ್ಲಿ ಮಧ್ಯಾಹ್ನ 3 ಗಂಟೆಗೆ ಗ್ರಾಮದಲ್ಲಿ ಬೈಕ್ ರ್ಯಾಲಿ ಮೂಲಕ ಶ್ರೀಗಳಿಗೆ ಸ್ವಾಗತ ಹಾಗೂ ಶ್ರೀಬೂದೀಶ್ವರ ಶ್ರೀಗಳ ಮಠದಿಂದ ವೀರಮಾತೆ ಚೆನ್ನಮ್ಮಾಜಿ ಭಾವಚಿತ್ರ ಮೆರವಣಿಗೆ ಮತ್ತು ಶ್ರೀಗಳಿಗೆ ಅವಳಿ ಗ್ರಾಮದಲ್ಲಿ ಪೂರ್ಣಕುಂಭ ಮೆರವಣಿಗೆ ನಡೆಸಲಾಗುವುದು. ನಂತರ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬೂದೇಶ ಮಾಗಡಿ, ಬಸವರಾಜ ಶಿವಳ್ಳಿ, ಮಂಜುನಾಥ ಶಿವಳ್ಳಿ, ನಾಗರಾಜ ಮದ್ನೂರು, ಬೂದೇಶ ಮುಳ್ಳಾಳ, ಈಶ್ವರಪ್ಪ ಕೊಪ್ಪಳ, ಡಿ.ಆರ್. ಮಜ್ಜಿಗುಡ್ಡ, ಎಂ.ವಿ. ಬಂಕದ, ಬಸಣ್ಣ ಪಲ್ಲೇದ ಮುಂತಾದವರು ಉಪಸ್ಥಿತರಿದ್ದರು.