ಗಡ್ಡದೇವರಮಠರಿಗೆ ಟಿಕೆಟ್ ನೀಡಿ
ಲಕ್ಷ್ಮೇಶ್ವರ: ಮುಂಬರುವ ವಿಪ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಮತಕ್ಷೇತ್ರದಿಂದ ಸ್ಪರ್ಧಿಸಲು ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಅವರಿಗೆ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಹಾಗೂ ಕರ್ನಾಟಕ ಪ್ರದೇಶ ಕುರುಬರ ಸಂಘದ ನಿರ್ದೇಶಕ ಸೋಮಣ್ಣ ಬೆಟಗೇರಿ ಪಕ್ಷದ ವರಿಷ್ಠರಿಗೆ ಆಗ್ರಹಿಸಿದರು. ಅವರು ಮಂಗಳವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿ.ಎಸ್. ಗಡ್ಡದೇವರಮಠ ಅವರು 2 ಬಾರಿ ಶಿರಹಟ್ಟಿ ಮತಕ್ಷೇತ್ರವನ್ನು ಪ್ರತಿನಿಧಿಸಿ 1 ಬಾರಿ ದಾಖಲೆಯ ಅಂತರದಲ್ಲಿ ಗೆಲುವು ಸಾಧಿಸಿದ್ದಲ್ಲದೇ, ಉತ್ತಮ ರಾಜಕಾರಣಿಯಾಗಿದ್ದು, ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಲ್ಲಿ ಅವರ ಪಾತ್ರ ಅಪಾರ. ಅವರಿಗೆ ಟಿಕೆಟ್ ನೀಡಿದರೆ ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಪಕ್ಷದ ವರಿಷ್ಠರು ಮಾಜಿ ಶಾಸಕ ಗಡ್ಡದೇವರಮಠ ಅವರಿಗೆ ಮುಂಬರುವ ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿ, ಕ್ಷೇತ್ರದಲ್ಲಿ ಸಂಚರಿಸಲು ವರಿಷ್ಠ ಮಂಡಳಿ ಸೂಚಿಸಬೇಕು ಎಂದು ಆಗ್ರಹಿಸಿದರು. ಪಕ್ಷದ ಯುವ ಮುಖಂಡ ನೀಲಪ್ಪ ಶರಸೂರಿ, ಮಾನು ಲಮಾಣಿ, ಗ್ರಾಪಂ ಸದಸ್ಯ ಫಕ್ಕಿರೇಶ ಮ್ಯಾಟೆಣ್ಣವರ, ನಾಗರಾಜ ಮಡಿವಾಳರ, ಶಿವಣ್ಣ ಕಬ್ಬೇರ, ಅಮರೇಶ ತೆಂಬದಮನಿ, ಕಿರಣ ನವಲೆ ಮುಂತಾದವರು ಉಪಸ್ಥಿತರಿದ್ದರು.
ಅಕ್ಷರ ದಾಸೋಹ ನೌಕರರ ಪ್ರತಿಭಟನೆ
ನರಗುಂದ: ಕಳೆದ ಹಲವಾರು ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಕನಿಷ್ಠ ವೇತನವಿಲ್ಲದೇ ಜೀವನ ನಡೆಸುತ್ತಿದ್ದು, ಸರ್ಕಾರ ತಕ್ಷಣವೇ ಅವರಿಗೆ ಕನಿಷ್ಠ ವೇತನ ನೀಡಬೇಕು ಹಾಗೂ ಅಕ್ಷರ ದಾಸೋಹ ವ್ಯವಸ್ಥೆಯನ್ನು ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಈಚೆಗೆ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಗರದ ಪ್ರಮುಖ ಬೀದಿಗಳಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗತ್ತಾ ಮಿನಿ ವಿಧಾನಸೌಧಕ್ಕೆ ತೆರಳಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಅಕ್ಷರ ದಾಸೋಹ ನೌಕರರ ಸಂಘ (ಸಿ.ಐ.ಟಿ.ಯು) ಜಿಲ್ಲಾ ಸಹ ಕಾರ್ಯದರ್ಶಿ ಶಿವಾನಂದ ಬೋಸ್ಲೆ ಮಾತನಾಡಿ, ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಿಬ್ಬಂದಿ ನಿರಂತರ ಶೋಷಣೆ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರ ನೌಕರರ ಸಮಸ್ಯೆಯತ್ತ ಗಮನ ನೀಡಬೇಕು ಎಂದರು. ತಹಸೀಲ್ದಾರ್ ಬಿ.ಬಿ. ನೀಲಣ್ಣವರ ಮನವಿ ಸ್ವೀಕರಿಸಿದರು. ತಾಲೂಕು ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷ ರೇಣುಕಾ ಹೆಗಡೆ, ಸಿದ್ದವ್ವ ಬೆಳವಣಿಕಿ, ಶೇಖವ್ವ ತೆಗ್ಗಿನಮನಿ, ಕಸ್ತೂರೆವ್ವ ಅಪೋಜಿ, ಗೌರಮ್ಮ, ಸರಸ್ವತಿ ಬೆಳವಣಿಕಿ, ಪಾರ್ವತವ್ವ ಹನುಮಂತಗೌಡ್ರ, ತುಳಸವ್ವ ಧಾರವಾಡ, ಬಿಬಿಜಾನ ಮುಲ್ಲಾನವರ, ತುಳಸವ್ವ ಬ್ಯಾಳಿ, ಮುತ್ತವ್ವ ಹೂಗಾರ, ಶಕುಂತಲಾ ಕಲ್ಲೂರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ನೌಕರರು ಪಾಲ್ಗೊಂಡಿದ್ದರು.