ಮುಸ್ಲಿಮರಿಲ್ಲದ ಊರಲ್ಲಿ ಮೊಹರಂ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ನ. 13
ಅನ್ಯ ಧರ್ಮಗಳ ಹಬ್ಬ, ಆಚರಣೆಗಳನ್ನು ಎಲ್ಲ ಧರ್ಮದವರೂ ಒಟ್ಟಾಗಿ ಆಚರಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಭಾರತ ದೇಶವು ಭಾವೈಕ್ಯತೆಗೆ ಹೆಸರು ವಾಸಿಯಾಗಿದೆ.
ಅದರಂತೆ ಸಮೀಪದ ಒಡೆಯರ ಮಲ್ಲಾಪುರದಲ್ಲಿ ಯಾವುದೇ ಮುಸ್ಲಿಂ ಕುಟುಂಬಗಳು ಇಲ್ಲದೆ ಇದ್ದರೂ ಇಲ್ಲಿ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಊರ ಮಧ್ಯದಲ್ಲಿ ಮಸೂತಿಯೊಂದನ್ನು ನಿರ್ಮಾಣ ಮಾಡಿದ್ದು, ಆ ಮಸೂತಿಯಲ್ಲಿ ಮೊಹರಂ ಹಬ್ಬದ ವೇಳೆಯಲ್ಲಿ ಹಸೇನ-ಹುಸೇನ ಮತ್ತು ಬೀಬಿ ಫಾತಿಮಾ ರೂಪದಲ್ಲಿ ಪಂಜಾಗಳನ್ನು ಕುಳ್ಳಿರಿಸಿ ಭಕ್ತಿ ಭಾವದಿಂದ ಪೂಜಿಸುತ್ತಿರುವುದು ಕಳೆದ 20 ವರ್ಷಕ್ಕೂ ಹೆಚ್ಚು ಕಾಲ ನಡೆದುಕೊಂಡು ಬಂದಿದೆ. ಈ ಗ್ರಾಮದಲ್ಲಿ ಕೇವಲ ಜೈನರು, ವಾಲ್ಮೀಕಿ ಹಾಗೂ ಆರೇರ್ ಜನಾಂಗಕ್ಕೆ ಸೇರಿದ ಜನರು ವಾಸಿಸುತ್ತಿದ್ದು, ಒಂದೇ ಒಂದು ಮುಸ್ಲಿಂ ಕುಟುಂಬವೂ ಇಲ್ಲಿ ಇಲ್ಲ. ಪಕ್ಕದ ಗ್ರಾಮವಾದ ಶಿಗ್ಲಿಯಿಂದ ಹಜರೇಸಾಬ ಕಾಟನಹಳ್ಳಿ ಎಂಬ ಮುಲ್ಲಾನನ್ನು ಕರೆಯಿಸಿ ಮೊಹರಂ ಹಬ್ಬದಲ್ಲಿ ಅಲೈ ದೇವರುಗಳಿಗೆ ಓದಿಕೆ (ವಿಶೇಷ ಪೂಜೆ) ಹಾಕುವ ಧಾರ್ಮಿಕ ಕಾರ್ಯವನ್ನು ಮಾಡಿಸಲಾಗುತ್ತಿದೆ. ಆದರೆ, ಈಚೆಗೆ ಹಜರೇಸಾಬ ಪೈಗಂಬರವಾಸಿಯಾದ ಕಾರಣ ಅವರ ಮೊಮ್ಮಗ ಆಸ್ಪಾಕ್ ಈಗ ಮೊಹರಂ ಹಬ್ಬದಲ್ಲಿ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಮೊಹರಂ ಹಬ್ಬದಲ್ಲಿ ವಿಶೇಷವಾಗಿ ಇಲ್ಲಿನ ನಿವಾಸಿಗಳು ಹೆಜ್ಜೆ ಮೇಳವನ್ನು ಹಾಕುತ್ತ ಆಲೆ ಕುಲೈ ದೇವರುಗಳಿಗೆ ಭಕ್ತಿ ಮತ್ತು ಶ್ರದ್ಧೆಯಿಂದ ಸೇವೆ ಸಲ್ಲಿಸುವುದು ಮೆಚ್ಚಲೇಬೇಕಾದ ಸಂಗತಿ. ಇದು ಭಾರತದ ಭಾವೈಕ್ಯತೆಗೆ ಸಾಕ್ಷಿಯಾಗಿ ನಿಲ್ಲುತ್ತದೆ.