ಶೈಕ್ಷಣಿಕ ಪ್ರಗತಿಗೆ ಕೆಎಲ್‌ಇ ಸಂಸ್ಥೆ ಪ್ರಮುಖ ಪಾತ್ರ
ಗದಗ: ಶತಮಾನಗಳ ಹಿಂದೆಯೇ ಕನ್ನಡ ಭಾಷೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಬದುಕು ಕಟ್ಟುವಲ್ಲಿ ಶೈಕ್ಷಣಿಕ ಕ್ರಾಂತಿಕಾರಕ ಹೆಜ್ಜೆಗೆ ಕಾರಣಿಕರ್ತರಾದ ಸಪ್ತರ್ಷಿಗಳ ಸ್ವಪ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಕೆಎಲ್‌ಇ ಶಿಕ್ಷಣ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸವದತ್ತಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವೈ.ಎಂ. ಯಾಕೊಳ್ಳಿ ಹೇಳಿದರು.
ಅವರು ಬುಧವಾರ ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಪದವಿ ಮತ್ತು ಪಪೂ ಮಹಾವಿದ್ಯಾಲಯ, ಎಸ್.ಎ. ಮಾನ್ವಿ ಕಾನೂನು ಮಹಾವಿದ್ಯಾಲಯ, ಕಲಾ, ವಾಣಿಜ್ಯ, ಸಹಶಿಕ್ಷಣ ಮಹಾವಿದ್ಯಾಲಯ, ಔಷಧ ವಿಜ್ಞಾನ ಮಹಾವಿದ್ಯಾಲಯ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ 98ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು. ಬ್ರಿಟಿಷರ ಆಡಳಿತದಲ್ಲಿ ನಲುಗಿದ್ದ ಸಾಮಾನ್ಯರಿಗೆ ಶಿಕ್ಷಣದ ಮಹತ್ವವೇ ಇಲ್ಲದ ದಿನಮಾನಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸುವ ಮೂಲಕ ಋಷಿ ಸದೃಶ್ಯ ವ್ಯಕ್ತಿತ್ವ ಹೊಂದಿದ್ದ ಕೆಎಲ್‌ಇ ಸಂಸ್ಥೆಯ ಹುಟ್ಟಿಗೆ ಕಾರಣೀಕರ್ತರಾಗಿದ್ದ ಸಪ್ತರ್ಷಿಗಳಾದ ಬಿ.ಎಸ್. ಹಂಚಿನಾಳ, ಎಚ್.ಎಫ್. ಕಟ್ಟಿಮನಿ, ಬಿ.ಬಿ. ಮಮದಾಪುರ, ಎಂ.ಆರ್. ಸಾಕರೆ, ಎಸ್.ಎಸ್. ಬಸವನಾಳ, ಪಿ.ಆರ್. ಚಿಕ್ಕೋಡಿ, ವಿ.ವಿ. ಪಾಟೀಲ ಹಾಗೂ ಮಹಾದಾನಿಗಳಾದ ಆರ್.ಸಿ. ಅರತಾಳ, ವಿ.ಎ. ಅನಗೌಡ್ರ, ವಿ.ಜಿ. ನಾಯಕ, ಲಿಂಗರಾಜ ಸರದೇಸಾಯಿ, ರಾಜಾಲಕ್ಮನಗೌಡ ಸರದೇಸಾಯಿ ಹಾಗೂ ಬಿ.ವಿ. ಭೂಮರಡ್ಡಿಯವರ ಶೈಕ್ಷಣಿಕ ಕೈಂಕರ್ಯ ಸದಾ ಸ್ಮರಣೀಯವಾಗಿದೆ. 1916 ರಲ್ಲಿಯೇ ಬೆಳಗಾವಿಯಲ್ಲಿ ಪ್ರಥಮ ಶೈಕ್ಷಣಿಕ ಸಂಸ್ಥೆ ಪ್ರಾರಂಭಿಸುವ ಮೂಲಕ ಈ ಭಾಗದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಕಾರಣಿಭೂತರಾಗಿದ್ದು, ಕಳೆದ 98 ವರ್ಷಗಳಲ್ಲಿ ಸಂಸ್ಥೆ ಹೆಮ್ಮರವಾಗಿ ಬೆಳೆದು ಇಂದು ತನ್ನ ವಿಶಾಲ ಕ್ಷೇತ್ರದ ಅಡಿಯಲ್ಲಿ 239 ಶಿಕ್ಷಣ ಸಂಸ್ಥೆಗಳನ್ನು ಹೊಂದಿ ಸಾವಿರಾರು ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಬೆಳಕು ನೀಡುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಅಲ್ಲದೇ ಮರಾಠಿ ಭಾಷೆಯ ಪ್ರಾಬಲ್ಯವುಳ್ಳ ಬೆಳಗಾವಿಯಲ್ಲಿ ಕನ್ನಡ ಭಾಷೆ ಪಸರಿಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ಸರ್ಕಾರಕ್ಕೆ ಸಮಾನಾಂತರವಾಗಿ ಶಿಕ್ಷಣ ರಂಗದಲ್ಲಿ ಸೇವೆ ಸಲ್ಲಿಸುತ್ತಾ ಆದರ್ಶವಾದಿ ಸಪ್ತರ್ಷಿಗಳು ಹಾಕಿಕೊಟ್ಟ ತಳಹದಿಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದರು. ಪಪೂ ವಿದ್ಯಾಲಯದ ಪ್ರಾಚಾರ್ಯ ಎಂ.ಎಂ. ನರಗುಂದ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯೆ ಇಂದು ವಾಣಿಜ್ಯೀಕರಣವಾಗುತ್ತಿರುವುದು ವಿಷಾದಕರ ಸಂಗತಿ. ಶತಮಾನಗಳ ಹಿಂದೆಯೇ ಶಿಕ್ಷಣದ ಮೂಲಕ ಸಾಮಾಜಿಕ ಜಗತ್ತಿಗೆ ಬೆಳಕು ನೀಡುವ ಕಾರ್ಯದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮ ಪಾತ್ರ ನಿರ್ವಹಿಸುತ್ತಿವೆ. ಕೆಎಲ್‌ಇ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ನೆರೆಯ ಮಹಾರಾಷ್ಟ್ರದ ಮುಂಬೈನಲ್ಲಿ ತನ್ನ ಮಹಾವಿದ್ಯಾಲಯ ಪ್ರಾರಂಭಿಸಿದ್ದು, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೈಕ್ಷಣಿಕ ವ್ಯವಸ್ಥೆ ಪಸರಿಸಲು ಕಾರಣೀಕರ್ತವಾಗಿದೆ. ಸಂಸ್ಥೆಯ ಹುಟ್ಟಿಗೆ ಕಾರಣರಾದ ಸಪ್ತರ್ಷಿಗಳ ತ್ಯಾಗ, ಸ್ವಾರ್ಥರಹಿತ ಸೇವೆಯನ್ನು ಅಳವಡಿಸಿಕೊಂಡು ಮುನ್ನುಗ್ಗುತ್ತಿದೆ ಎಂದರು. ಅಧ್ಯಕ್ಷತೆಯನ್ನು ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ವಿ.ಐ. ಕುರಗೋಡ ವಹಿಸಿದ್ದರು. ಅಂಗಸಂಸ್ಥೆಗಳ ಪ್ರಾಚಾರ್ಯರಾದ ಎಂ.ಬಿ. ಚೆನ್ನಪ್ಪಗೌಡ್ರ, ಎಸ್.ಆರ್. ಪಾಟೀಲ, ಕವಿತಾ ಕುಲಕರ್ಣಿ, ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಈಶಣ್ಣ ಮುನವಳ್ಳಿ, ಅಶೋಕ ನಿಲೂಗಲ್, ಎಚ್.ವೈ. ದೇಸಾಯಿಗೌಡ್ರ, ಹಾದಿಮನಿ, ಡಾ. ಬಿ.ಎಂ. ಆಲೂರ, ಸಂಶಿಮಠ ಮುಂತಾದವರು ಉಪಸ್ಥಿತರಿದ್ದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಯಂಕಂಚಿ ಸ್ವಾಗತಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಂಜರಿ ಹೊಂಬಾಳಿ ನಿರೂಪಿಸಿದರು. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೆ.ಎ. ಪಾಟೀಲ ವಂದಿಸಿದರು.