ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಹಿಂದೂಗಳಿಂದಲೇ ಮಸೀದಿ ನಿರ್ಮಾಣ: ಮೊಹರಂ ಆಚರಣೆ

Lingaraj Badiger
Updated On : 14 Nov 2013, 11:08 am

ಮುಂಡರಗಿ: ಮುಂಡರಗಿ ತಾಲೂಕು ಸೌಹಾರ್ದತೆಗೆ ಹೆಸರಾಗಿದೆ. ತಾಲೂಕಿನ ಬೀಡನಾಳ, ಶೀರನಹಳ್ಳಿ, ಗುಡ್ಡದಬೂದಿಹಾಳ, ಶಿಂಗಟರಾಯಣಕೇರಿ ತಾಂಡಾ ಈ ಎಲ್ಲ ಗ್ರಾಮಗಳಲ್ಲಿಯೂ ಮುಸ್ಲಿಂ ಸಮಾಜದವರು ಇಲ್ಲ. ಆದರೆ ಪ್ರತಿ ವರ್ಷವೂ ತಪ್ಪದೇ ಈ ಎಲ್ಲ ಗ್ರಾಮಗಳಲ್ಲಿಯೂ ಶ್ರದ್ಧಾ, ಭಕ್ತಿಯಿಂದ ಇತರೆ ಸಮಾಜದವರೇ ಮೊಹರಂ ಆಚರಿಸುತ್ತಾರೆ.
ಬಿಡನಾಳದಲ್ಲಿ ಒಂದೇ ಒಂದು ಮುಸ್ಲಿಂ ಮನೆಯಿಲ್ಲದಿದ್ದರೂ ಆ ಗ್ರಾಮದಲ್ಲಿ ಅನೇಕ ವರ್ಷಗಳಿಂದ ತಪ್ಪದೇ ಮೊಹರಂ ಆಚರಿಸಲಾಗುತ್ತಿದ್ದು, ಪಕ್ಕದ ಕಲಕೇರಿ ಗ್ರಾಮದಿಂದ ಮುಲ್ಲಾಸಾಹೇಬರನ್ನು ಕರೆಯಿಸಿ ಮೊಹರಂ ಹಬ್ಬದ ಎಲ್ಲ ತಯಾರಿ ಮಾಡಿ ದೇವರು ಕೂಡಿಸುವ ಕಾರ್ಯ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಗ್ರಾಮದ ನಾಲ್ಕು ಗ್ರಾಪಂ ಸದಸ್ಯರು ಹಾಗೂ ಕೆಲವು ಗಣ್ಯರು ಸೇರಿ ಸುಮಾರು ರು. 2 ಲಕ್ಷ ಖರ್ಚು ಮಾಡಿ ಮಸೀದಿ ನಿರ್ಮಿಸಿದ್ದಾರೆ. ಅದರಲ್ಲಿ ಸುಮಾರು 25 ಅಲೈ ದೇವರನ್ನು ಕೂಡ್ರಿಸುವ ಮೂಲಕ ಮೊಹರಂ ಹಬ್ಬ ಆಚರಿಸಲಾಗುತ್ತಿದೆ. ಮೋಹರಂ ಹಬ್ಬದ ಅಂಗವಾಗಿ ಗ್ರಾಮಸ್ಥರು ಹೆಜ್ಜೆಹಾಕುವುದು, ರಿವಾಯತ್ ಪದಗಳನ್ನು ಹಾಡುವುದು, ಕೆಲವರು ಕೈಗೆ, ಮೈಗೆ ಹಳದಿ ಬಣ್ಣ ಹಚ್ಚಿಕೊಂಡು ಹುಲಿ ವೇಷ, ಕರಡಿ ಹಾಗೂ ಅಳ್ಳೊಳ್ಳಿ ಬವ್ವಾ ವೇಷಧಾರಿಗಳಾಗಿ ಕುಣಿಯುತ್ತಾರೆ.
ಹೆಜ್ಜೆ ಮೇಳದ ಮೆರವಣಿಗೆ:  ಮೊಹರಂ ಅಬ್ಬದ ಅಂಗವಾಗಿ ಗ್ರಾಮದಲ್ಲಿ 10 ದಿನಗಳ ಕಾಲ ಮಸೀದಿಯ ಮುಂದೆ ಬೆಳಗ್ಗೆ ಹಾಗೂ ರಾತ್ರಿಯ ಸಮಯದಲ್ಲಿ ರಿವಾಯತ್ ಪದ ಹಾಗೂ ಹೆಜ್ಜೆ ಮೇಳದ ತಂಡ ಕಟ್ಟಿಕೊಂಡು ಹೆಜ್ಜೆ ಹಾಕುವುದು, ಮೊಡಕೇರ ಆಟಗಳನ್ನು ಆಡುವುದು ಇಲ್ಲಿನ ವಿಶೇಷ. ಸುಮಾರು 20 ರಿಂದ 30 ಜನರಿರುವ ತಂಡದಂತೆ ಮೂರು ತಂಡಗಳನ್ನು ಕಟ್ಟಿಕೊಂಡು ಗ್ರಾಮದಲ್ಲಿ ಹೆಜ್ಜೆ ಮೇಳದ ಮೆರವಣಿಗೆ ಹೊರಡಿಸುವುದರ ಮೂಲಕ ಹಬ್ಬದ ಮಹತ್ವವನ್ನು ತಮ್ಮ ಹಾಡಿನ ಮೂಲಕ ಹೇಳುತ್ತಾರೆ. ಅಲ್ಲದೇ ಪ್ರತಿದಿನಕ್ಕೊಂದರಂತೆ ಬೇರೆ ಗ್ರಾಮಗಳಿಗೆ ತೆರಳಿ ಹೆಜ್ಜೆಹಾಕಿ ಬರುವುದು ಇಲ್ಲಿನ ಮೊಹರಂ ಹಬ್ಬದ ವಿಶೇಷ.
ಅದರಂತೆ ತಾಲೂಕಿನ ಬಾಗೇವಾಡಿ ಗ್ರಾಪಂ ವ್ಯಾಪ್ತಿಯ ಗುಡ್ಡದ ಬೂದಿಹಾಳ ಗ್ರಾಮದಲ್ಲಿಯೂ ಇತರೇ ಸಮಾಜ ಬಾಂಧವರೇ ಹಬ್ಬವನ್ನು ಆಚರಿಸುತ್ತಿದ್ದಾರೆ. ಗ್ರಾಮದಲ್ಲಿ ಜಾತ್ರೆ ಆಚರಿಸಿದಂತೆ 15 ದಿನಗಳ ಮೊದಲೇ ಮೊಹರಂ ಹಬ್ಬದ ವಿಶೇಷತೆಯನ್ನು ಸಾರುವ ಬಿತ್ತಿಪತ್ರಗಳನ್ನು ಮಾಡಿ ಹಂಚಲಾಗುತ್ತಿದೆ. ಇದರಿಂದಾಗಿ ಇಲ್ಲಿಯೂ ಸಂಭ್ರಮದ ಆಚರಣೆ ನಡೆಯುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement