ಭಾಷೆ ಬೆಳವಣಿಗೆಗೆ ಗಮನಹರಿಸಿ
ನರಗುಂದ: ಯುವಕರು ಭಾಷಾಭಿಮಾನ ಬೆಳೆಸಿಕೊಳ್ಳುವ ಮೂಲಕ ಭಾಷೆಯನ್ನು ಉಳಿಸುವತ್ತ ಗಮನ ನೀಡಬೇಕು ಎಂದು ಗದುಗಿನ ಕೆ.ಎಸ್.ಎಸ್. ಮಹಾವಿದ್ಯಾಲಯ ಪ್ರಾಧ್ಯಾಪಕ ಡಾ. ಶರಣಬಸವ ವೆಂಕಟಾಪುರ ಹೇಳಿದರು.
ಅವರು ಈಚೆಗೆ ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ, ಕನ್ನಡ ಮತ್ತು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸಂಘ, ದೊರೆಸ್ವಾಮಿ ವಿರಕ್ತಮಠದ ಆಶ್ರಯದಲ್ಲಿ ಶಿರೋಳದ ಕಲ್ಮೇಶ್ವರ ದೇವಸ್ಥಾನದಲ್ಲಿ ನಡೆದ ಕನ್ನಡ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೂರದರ್ಶನದ ಅನೇಕ ವಾಹಿನಿಗಳಲ್ಲಿ ಕನ್ನಡ ಪದಗಳ ಬಳಕೆ ಕಡಿಮೆಯಾಗಿ, ಆಂಗ್ಲ ಶಬ್ದಗಳನ್ನೇ ಹೆಚ್ಚು ಪ್ರಚಾರ ಮಾಡುತ್ತವೆ. ಅದಕ್ಕೆ ಮಕ್ಕಳು, ಯುವ ಪೀಳಿಗೆ ಅದೇ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾತೃ ಭಾಷೆ ಕುಂಠಿತವಾಗಿದೆ. ಈ ವಿಷಯದಲ್ಲಿ ಯುವ ಜನತೆ ಎಚ್ಚರ ವಹಿಸಿ ನಮ್ಮ ನಾಡು, ನುಡಿ, ಜಲದ ಸಮಸ್ಯೆಗಳು ಬಂದಾಗ ಯುವ ಶಕ್ತಿ ಒಂದಾಗಿ ಕೆಲಸ ಮಾಡಬೇಕಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಣ್ಣ ಕುರಿ ಕಾರ್ಯಕ್ರಮ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಳವಾಡದ ಮಲ್ಲಯ್ಯ ತೋಟಗಂಟಿ ಹಾಗೂ ಸಂಗಡಿಗರಿಂದ ಕನ್ನಡ ಜಾಗೃತಿ ಕುರಿತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಪ್ರಭಾಕರ ಉಳ್ಳಾಗಡ್ಡಿ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ ತಿಮ್ಮನಗೌಡ್ರ, ಗ್ರಾಪಂ ಅಧ್ಯಕ್ಷೆ ಬಸಣ್ಣವ್ವ ವಸ್ತ್ರದ, ಪ್ರೊ. ಜಂಪಣ್ಣವರ, ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಬಸವರಾಜ ಕುಪ್ಪಸ್ತಸ, ಬಸಯ್ಯ ಗಣಾಚಾರಿ, ರಂಜಾನಸಾಬ್ ನದಾಫ್, ವಿ.ಕೆ. ಮರಗುದ್ದಿ, ತಿಪ್ಪಣ್ಣ ಕೊಣ್ಣೂರ, ಲೋಕಪ್ಪ ಕರಕಿಟ್ಟಿ, ಚಿದಾನಂದ ಹುಣಿಸಿಮರದ, ಬಸವರಾಜ ಕೊಡಬಳಿ, ಎಸ್.ಎಸ್. ಧೋತರದ ಮುಂತಾದವರು ಹಾಜರಿದ್ದರು.
ಬಿ.ಎಸ್. ಕೊಡಬಳಿ ಸ್ವಾಗತಿಸಿದರು. ಬಾಪುಗೌಡ ತಿಮ್ಮನಗೌಡ್ರ ನಿರೂಪಿಸಿದರು, ಉಳ್ಳಾಗಡ್ಡಿ ವಂದಿಸಿದರು.