ಸುದ್ದಿ ಸಂಕ್ಷೇಪ
ಅತ್ತಿಕಟ್ಟಿಯಲಿ ಗಣಿಗಾರಿಕೆ ವದಂತಿ: ಕುಲಕರ್ಣಿ
ಗದಗ: ಜಿಲ್ಲೆಯ ಅತ್ತಿಕಟ್ಟೆ ಬಳಿ ಪ್ರಾರಂಭಗೊಳ್ಳಲಿರುವ ಆರ್ಎಂಎಂಎಲ್ ಚಿನ್ನ ಸಂಸ್ಕರಣ ಘಟಕವು ಕಾನೂನಿನ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿನ ಕೆಲವರು ದುರುದ್ದೇಶದಿಂದ ಕಂಪನಿಯ ವಿರುದ್ಧ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು ಎಂದು ಬಲ್ಡೋಟಾ ಸಮೂಹದ ಆರ್ಎಂಎಂಎಲ್ ಕಂಪನಿಯ ಉಪಾಧ್ಯಕ್ಷ ಅಜಿತ್ ಕುಲಕರ್ಣಿ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಆರ್ಎಂಎಂಎಲ್ ಬಗ್ಗೆ ಕೆಲವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿದ್ದಾರೆ. ಅತ್ತಿಕಟ್ಟಿಯ ಜಮೀನಿನಲ್ಲಿ ಚಿನ್ನದ ಅದಿರು ಇದೆ. ಅಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ ಎಂದು ವದಂತಿ ಹರಡಿಸುತ್ತಿದ್ದಾರೆ. ಅತ್ತಿಕಟ್ಟಿಯಲ್ಲಿ ಕಂಪನಿ ಖರೀದಿಸಿರುವ ಜಮೀನಿನಲ್ಲಿ ಕೇವಲ ಸಂಸ್ಕರಣಾ ಘಟಕ ಸ್ಥಾಪಿಸುತ್ತಿದೆ. ಆ ಭೂಮಿಯಲ್ಲಿ ಗಣಿಗಾರಿಕೆ ನಡೆಸಲು ಸಾಧ್ಯವಿಲ್ಲ. 2008ರಲ್ಲಿಯೇ ಭೂಮಿ ಖರೀದಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂದು ಮಾರುಕಟ್ಟೆಯಲ್ಲಿದ್ದ ಬೆಲೆಗಿಂತ ಜಮೀನು ಮಾಲೀಕರಿಗೆ, ಉದ್ಯಮ ಸ್ಥಾಪಿಸುವ ಉದ್ದೇಶ ಕುರಿತು ಸಮಗ್ರ ಮಾಹಿತಿ ನೀಡಿ, 6 ಪಟ್ಟು ಹೆಚ್ಚಿನ ಬೆಲೆ ನೀಡಿ ಕಾನೂನು ಪ್ರಕಾರ ಖರೀದಿ ಪ್ರಕ್ರಿಯೆ ನಡೆಸಲಾಗಿದೆ. ಈ ಕುರಿತು ಭಾರತ ಸರ್ಕಾರದ ಖನಿಜ ಇಲಾಖೆ ಹಾಗೂ ರಾಜ್ಯ ಪತ್ರದಲ್ಲಿಯೂ ಆದೇಶ ಹೊರಡಿಸಿದೆ. ಗದಗ ಜಿಲ್ಲಾಧಿಕಾರಿಗಳು ಈ ಕಾಮಗಾರಿಗೆ ನೀಡಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವು ಕಚ್ಚಿ ಮಹಿಳೆ ಸಾವು
ನರಗುಂದ: ಹೊಲಕ್ಕೆ ಕೆಲಸ ಮಾಡಲು ಹೋದ ಸಂದರ್ಭದಲ್ಲಿ ಹಾವು ಕಡಿದು ಮಹಿಳೆಯೋರ್ವಳು ಮೃತಪಟ್ಟ ಘಟನೆ ತಾಲೂಕಿನ ರಡ್ಡೇರನಾಗನೂರು ಗ್ರಾಮದಲ್ಲಿ ಜರುಗಿದೆ. ಬುಧವಾರ ಬೆಳಗ್ಗೆ ಹೊಲದ ಕೆಲಸಕ್ಕೆ ತೆರಳಿದ್ದ ಮಲ್ಲವ್ವ ಬೀರಗೌಡ್ರ (45) ಎನ್ನುವರಿಗೆ ಹೊಲದಲ್ಲಿ ಹಾವು ಕಚ್ಚಿದ್ದು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿತ್ತು. ಚಿಕಿತ್ಸೆಯು ಫಲಕಾರಿಯಾಗದೇ ಗುರುವಾರ ಸಾವನ್ನಪ್ಪಿದ್ದಾರೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.