ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಿರ್ವಹಣೆಯಿಲ್ಲದ ರೋಣ ಗ್ರಂಥಾಲಯ

Lingaraj Badiger
Updated On : 16 Nov 2013, 11:55 am

ಕನ್ನಡಪ್ರಭ ವಾರ್ತೆ, ರೋಣ, ನ. 15
ಕುಳಿತುಕೊಳ್ಳಲು ಬಾರದ ಮುರಿದ ಕುರ್ಚಿಗಳು, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಪುಸ್ತಕಗಳು, ದೂಳು ತುಂಬಿದ ಓದುವ ಹಾಲ್, ಒಂದು ದಿನ ತಡವಾಗಿ ಸಿಗುವ ದಿನಪತ್ರಿಕೆಗಳು, ಓದಲು ನೀಡದೇ ಮೂಟೆಯಲ್ಲಿ ತುಂಬಿಟ್ಟ ಪುಸ್ತಕಗಳು, ಇಲ್ಲಿನ ಪುಸ್ತಕಗಳನ್ನು, ಪತ್ರಿಕೆಗಳನ್ನು ಯಾರೇ ಎತ್ತಿಕೊಂಡು ಹೋದರೂ ಕೇಳುವವರೇ ಇಲ್ಲ. ಇದು ಪಟ್ಟಣದ ಕೇಂದ್ರೀಯ ಗ್ರಂಥಾಲಯದ ಅವ್ಯವಸ್ಥೆಯ ಚಿತ್ರಣ.
ಹೌದು, ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಹತ್ತಿರವಿರುವ ಗ್ರಂಥಾಲಯಕ್ಕೆ 6 ತಿಂಗಳಿನಿಂದ ಮೇಲ್ವಿಚಾರಕರಿಲ್ಲ. ಉಸ್ತುವಾರಿಗೆಂದು ತಾತ್ಕಾಲಿಕವಾಗಿ ಗಜೇಂದ್ರಗಡದ ಗ್ರಂಥಾಲಯ ಮೇಲ್ವಿಚಾರಕರನ್ನು ನೇಮಿಸಿದ್ದಾರೆ. ಅವರು 15 ದಿನಕ್ಕೊಮ್ಮೆ ಬರುತ್ತಾರೆ. ಓದುಗರಿಗೆ ಕೊಡಬೇಕಾದ ಅಮೂಲ್ಯ ಪುಸ್ತಕಗಳು ದೂಳು ತುಂಬಿ ಹಾಳಾಗುತ್ತಿವೆ. ದಿನಗೂಲಿ ಆಧಾರದ ಮೇಲೆ ಸೀತವ್ವ ಚಲವಾದಿ ಎಂಬ ವೃದ್ಧ ಮಹಿಳೆ ಮಾತ್ರ ಇದ್ದು, ಅವಳಿಗೆ ವಯಸ್ಸಾದ್ದರಿಂದ ರಾತ್ರಿ ಕಣ್ಣು ಕಾಣಿಸುವುದಿಲ್ಲ.
ಪುಸ್ತಕಗಳನ್ನು ಒಯ್ಯುತ್ತಾರೆ: ಗ್ರಂಥಾಲಯಕ್ಕೆ ಬರಬೇಕಿದ್ದ ದಿನ ಪತ್ರಿಕೆಗಳನ್ನು ಈ ಹಿಂದೆ ಗ್ರಂಥಾಲಯದ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿದ್ದ (ನಿವೃತ್ತಿ ಹೊಂದಿ 6 ತಿಂಗಳಾಗಿವೆ) ವಿ.ಜಿ. ಪಾಟೀಲ ಎಂಬುವರು ತಮ್ಮ ಮನೆಗೆ ನಿತ್ಯ ತರಿಸಿಕೊಳ್ಳುತ್ತಿದ್ದಾರೆ. ಮರುದಿನವೇ ಅವುಗಳು ಗ್ರಂಥಾಲಯ ಸೇರುತ್ತಿವೆ. ಅಲ್ಲದೇ ಗ್ರಂಥಾಲಯಕ್ಕೆ ಬರುವ ಕೆಲವರು ಇಲ್ಲಿನ ಪುಸ್ತಕಗಳನ್ನೇ ಒಯ್ಯುತ್ತಾರೆ. ಇಂಥವರನ್ನು ಯಾರೂ ಕೇಳುವವರೇ ಇಲ್ಲ. ಇದಕ್ಕೆ ಸಂಬಂಧಪಟ್ಟ ಜಿಲ್ಲಾ ಗ್ರಂಥಾಲಯ ಮುಖ್ಯಸ್ಥರಿಗೆ ತಿಳಿಸಿದರೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎನ್ನುವುದು ಇಲ್ಲಿನ ಓದುಗರ ಮಾತಾಗಿದೆ.

ಪುಸ್ತಕ ಸಿಗುವುದೇ ಕಷ್ಟ
ಇಲ್ಲಿಗೆ ಬರುವ ಓದುಗರಿಗೆ ಯಾವುದಾದರೊಂದು ಪುಸ್ತಕ ಬೇಕೆಂದರೆ ವಾರಪೂರ್ತಿ ಹುಡುಕಿದರೂ ಅದು ಸಿಗುವುದಿಲ್ಲ. ಏಕೆಂದರೆ ಕೃಷಿ, ವಿಜ್ಞಾನ, ರಾಜಕೀಯ, ಕ್ರೀಡೆ, ಮಕ್ಕಳ ಸಾಹಿತ್ಯ, ಜನಪದ, ವಾಣಿಜ್ಯ, ಕಥೆಗಳು, ಕವನ ಸಂಕಲನ, ಕಲೆ, ಇತಿಹಾಸ, ವಚನ, ಕಾನೂನು, ಔದ್ಯೋಗಿಕ, ಮಹಾಕಾವ್ಯಗಳು ಸೇರಿದಂತೆ ವಿವಿಧ ಸಾಹಿತ್ಯಿಕ ಗ್ರಂಥಗಳನ್ನು ವಿಂಗಡಿಸಿ ವಿಭಾಗಗಳನ್ನಾಗಿ ಮಾಡಿ ಇಟ್ಟಿರುವುದಿಲ್ಲ. ಎಲ್ಲೆಂದರಲ್ಲಿ ಪುಸ್ತಕಗಳನ್ನ ಇಡಲಾಗಿದೆ. ಹಾಗಾಗಿ ತಮಗೆ ಬೇಕಾದ ಪುಸ್ತಕವನ್ನು ವಾರಪೂರ್ತಿ ಹುಡಿಕಿದರೂ ಸಿಗದಂತಹ ಪರಿಸ್ಥಿತಿಯಿದೆ.

ಗ್ರಂಥಾಲಯಕ್ಕೆ 3 ವರ್ಷಗಳಿಂದ ಗ್ರಹಣ ಹಿಡಿದಿದೆ. ಇಲ್ಲಿಗೆ ವಾರ, ದಿನ ಪತ್ರಿಕೆಗಳು ಸರಿಯಾಗಿ ಬರುತಿಲ್ಲ. ಹಿಂದೆ ಗ್ರಂಥಾಲಯ ಮೇಲ್ವಿಚಾರಕರಾಗಿದ್ದ ವಿ.ಜಿ. ಪಾಟೀಲ ಎಂಬುವರ ಮನೆಗೆ ಈಗಲೂ  ಗ್ರಂಥಾಲಯಕ್ಕೆ ಬರಬೇಕಿದ್ದ ಪತ್ರಿಕೆಗಳು ಅವರ ಮನೆಗೆ ಸೇರುತ್ತಿವೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅಗತ್ಯ ಸಿಬ್ಬಂದಿ ನೇಮಿಸಬೇಕು ಹಾಗೂ ಗ್ರಂಥಾಲಯದಲ್ಲಿನ ಪುಸ್ತಕಗಳ ಕುರಿತು  ಲೆಕ್ಕವಿರಬೇಕು. ಇಲ್ಲದಿದ್ದಲ್ಲಿ ಸಾರ್ವಜನಿಕರೊಂದಿಗೆ ಬೀದಿಗಿಳಿದು ಪುಸ್ತಕಗಳ ಲೆಕ್ಕ ಕೊಡಿ ಎಂಬ ಚಳವಳಿ ಹಮ್ಮಿಕೊಳ್ಳಲಾಗುವುದು.
ಫಕೀರಪ್ಪ ತೆಗ್ಗಿನಮನಿ
ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ

ರೋಣದಲ್ಲಿನ ಗ್ರಂಥಾಲಯ ಅವ್ಯವಸ್ಥೆ ಕುರಿತು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಕೂಡಲೇ ಅಲ್ಲಿನ ಅವ್ಯವಸ್ಥೆ ಸರಿಪಡಿಸಲಾಗುವುದು. ಜಿಲ್ಲಾದ್ಯಂತ ಸಿಬ್ಬಂದಿ ಕೊರತೆಯಿದೆ. ಖಾಲಿ ಹುದ್ದೆಗಳ ನೇಮಕಕ್ಕೆ ಈಗಾಗಲೇ 2 ಬಾರಿ ರಾಜ್ಯ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ.
ಎಸ್.ಬಿ. ಜೀರಗಾಳ
ಗದಗ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ
-ಪಿ.ಎಸ್. ಪಾಟೀಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement