ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಮನವಿ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಕಾಲೇಜು ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಹಾಗೂ ಪ್ರತಿ ದಿನ ಬೇರೆ ಬೇರೆ ಗ್ರಾಮಗಳಿಂದ ಭೈರನಹಟ್ಟಿ ಗ್ರಾಮಕ್ಕೆ ಬರುವ ಶಿಕ್ಷಕರಿಗೆ ಸರಿಯಾದ ಬಸ್ ಸೌಕರ್ಯವಿಲ್ಲದೇ ತೊಂದರೆಯಾಗುತ್ತಿದ್ದು, ಈ ಕುರಿತು ಕೂಡಲೇ ಸಮರ್ಪಕ ಬಸ್ ಸೌಕರ್ಯಕ್ಕೆ ಆಗ್ರಹಿಸಿ ಈಚೆಗೆ ನರಗುಂದದ ಬಸ್ ವ್ಯವಸ್ಥಾಪಕ ದೀಪಕ ಜಾಧವ ಅವರಿಗೆ ಮನವಿ ಸಲ್ಲಿಸಲಾಯಿತು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೀಡಿದ ಮನವಿ ಸ್ವೀಕರಿಸಿದ ದೀಪಕ ಜಾಧವ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಗಳಿಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್‌ನ ಸೌಕರ್ಯವಿಲ್ಲದಿರುವ ಕುರಿತು ಈಗ ಗಮನಕ್ಕೆ ತರಲಾಗಿದೆ. ಈಗಾಗಲೇ ನರಗುಂದದಿಂದ ಭೈರನಹಟ್ಟಿ ಗ್ರಾಮದ ಮೂಲಕ ಬಿಜಾಪುರ, ಮೀರಜ, ತುಳಜಾಪುರ ಮುಂತಾದ ಪ್ರಮುಖ ನಗರಗಳಿಗೆ ಸಂಚರಿಸುವ ಬಸ್‌ಗಳನ್ನು ಗ್ರಾಮಕ್ಕೆ ನಿಲುಗಡೆಗೆ ಸೂಚಿಸಲಾಗುವುದು ಎಂದರು.