ಶ್ರದ್ಧಾ ಭಕ್ತಿಯ ಮೊಹರಂ ಆಚರಣೆ
ಗಜೇಂದ್ರಗಡ: ಸತ್ಯದ ಉಳಿವಿಗಾಗಿ ಹಗಲಿರುಳು ಹೋರಾಡಿ ಹುತಾತ್ಮರಾದ ಪ್ರವಾದಿ ಇಮಾಮ್ ಹುಸೇನರ ಸ್ಮರಣಾರ್ಥ ಭಾವೈಕ್ಯತೆಯ ಸಂಕೇತವಾಗಿ ಹಿಂದು ಮುಸಲ್ಮಾನ ಬಾಂಧವರು ಶುಕ್ರವಾರ ಮೊಹರಂ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಮೊಹರಂ ಕೊನೆಯ ದಿನವಾದ ಶುಕ್ರವಾರ ಬೆಳಗ್ಗೆ ಪಟ್ಟಣದ ರಾಜವಾಡೆ ಆವರಣದಲ್ಲಿ ಎಲ್ಲ 18 ಮಸೀದಿಗಳಿಂದ ಆಗಮಿಸಿದ ಪಂಜಾ ಲೇಪಿತ ದೇವರುಗಳಿಗೆ ಸಂಪ್ರದಾಯದಂತೆ ರಾಜ ವಂಶಸ್ಥ ಘೋರ್ಪಡೆ ಮನೆತನದವರು ಸಾಮೂಹಿಕ ಪೂಜೆ ಸಲ್ಲಿಸಿದರು.
ಬಳಿಕ ರಾಜವಾಡೆಯ ಸಿಪಾಯಿ ಮೂರು ಬಾರಿ ಕರ್ಣ ವಾದ್ಯ ಮೊಳಗಿದ ಮೇಲೆ ಎಲ್ಲ 18 ಮಸೀದಿಗಳಿಂದ ಆಗಮಿಸಿದ ದೇವರುಗಳು ತಮ್ಮ ಮಸೀದಿಗಳಿಗೆ ತೆರಳಿದವು. ಸಂಜೆ 6 ಗಂಟೆಗೆ 18 ಮಸೀದಿಗಳ ದೇವರುಗಳು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಕ್ತಿ ಭಾವದ ಭವ್ಯ ಮೆರವಣಿಗೆಯಲ್ಲಿ ಗೆಜ್ಜೆ ಕುಣಿತ, ಜಾಂಝ ಮೇಳ, ಕಲರವ ನೋಡುಗರನ್ನು ಭಕ್ತಿ ಸಾಗರದಲ್ಲಿ ತೇಲಿಸುವಂತೆ ಮಾಡಿತು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡರು.