ಅಕ್ರಮ ಪಡಿತರ ಸಾಗಾಟ: ವಶ
ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ನಗರದಲ್ಲಿನ ಮನೆಯೊಂದರಿಂದ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಬೇರೆಡೆಗೆ ಸಾಗಿಸುತ್ತಿದ್ದ ಲಾರಿಯೊಂದನ್ನು ಶನಿವಾರ ಬೆಳಗಿನ ಜಾವ ದಾಳಿ ಮಾಡಿದ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜರುಗಿದೆ.
ಶನಿವಾರ ಬೆಳಗಿನ ಜಾವ ಅಕ್ರಮವಾಗಿ ಪಡಿತರ ಆಹಾರ ಧಾನ್ಯವನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿಯನ್ನಾಧರಿಸಿ ದಾಳಿ ಮಾಡಿದ ಸಿಪಿಐ ಶ್ರೀನಿವಾಸ ಮೇಟಿ, ಪಿಎಸ್ಐಗಳಾದ ವಿಕಾಸ ಲಮಾಣಿ ಹಾಗೂ ಎಚ್.ಎಲ್. ಧರ್ಮಟ್ಟಿಯವರು ಸ್ಥಳದಲ್ಲಿದ್ದ 50 ಕೆಜಿ ತೂಕದ 200 ಚೀಲ ಪಡಿತರ ಅಕ್ಕಿಯನ್ನು ಲಾರಿ ಸಮೇತ ವಶಪಡಿಸಿಕೊಂಡಿದ್ದಾರೆ. ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಟ್ಟಣದ ಬಸವರಾಜ ಚೆನ್ನಬಸಪ್ಪ ಬಂಕಾಪುರ ಎನ್ನುವವರನ್ನು ಬಂಧಿಸಲಾಗಿದೆ. ಈ ಕುರಿತು ಪಡಿತರ ಆಹಾರ ಇಲಾಖೆಯ ಅಧಿಕಾರಿಗಳ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಶ್ರೀನಿವಾಸ ಮೇಟಿ ತಿಳಿಸಿದ್ದಾರೆ.
ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಆಹಾರ ಧಾನ್ಯದ ಚೀಲಗಳ ಮೇಲೆ ಸಾರ್ವಜನಿಕರ ವಿತರಣೆಗಾಗಿ ವಿತರಿಸುವ ಅಕ್ಕಿ ಎನ್ನುವ ಲೇಬಲ್ ಇದ್ದು, ಇದು ಹಲವು ಅನುಮಾನಕ್ಕೆ ಕಾರಣವಾಗಿದೆ. ಈ ಅಕ್ರಮ ಕಾರ್ಯದಲ್ಲಿ ಪಡಿತರ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪಡಿತರ ವಿತರಣೆ ಮಾಡುತ್ತಿರುವ ಅಂಗಡಿಯ ಮಾಲೀಕರು ಪಾಲುದಾರರಾಗಿದ್ದು, ಅಕ್ರಮವಾಗಿ ಪಡಿತರ ಆಹಾರ ಧಾನ್ಯ ಸಾಗಾಟ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ. ದಾಳಿಯ ಸಂದರ್ಭದಲ್ಲಿ ಪಟ್ಟಣದ ಪೊಲೀಸ್ ಇಲಾಖೆಯ ಬನ್ನಿಕೊಪ್ಪ, ಯರಗಟ್ಟಿ, ದೇಶಪಾಂಡೆ, ಅಶೋಕ ಪಿನಾಕಿಮಠ, ಅಮಾತ್ಯನವರ ಮುಂತಾದ ಸಿಬ್ಬಂದಿ ಹಾಜರಿದ್ದರು.