ರು. 10 ಲಕ್ಷದಲ್ಲಿ ಕ್ರೀಡಾಂಗಣ ಅಭಿವೃದ್ಧಿ
ರೋಣ: ಪಟ್ಟಣದಲ್ಲಿನ ದ್ರೋಣಾಚಾರ್ಯ ತಾಲೂಕು ಕ್ರೀಡಾಂಗಣ ತುಂಬೆಲ್ಲ ಗಿಡಗಂಟಿ ಬೆಳೆದು ಸಂಪೂರ್ಣ ಹದಗೆಟ್ಟ ಕುರಿತು 'ಕನ್ನಡಪ್ರಭ' ನ. 12 ರಂದು ರೋಣ ಕ್ರೀಡಾಂಗಣ ಭಣ ಭಣ ಎಂಬ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ ಉಪವಿಭಾಗ ಅಧಿಕಾರಿ ಇಸ್ಲಾವುದ್ದಿನ ಗದ್ಯಾಳ ಶುಕ್ರವಾರ ಸಂಜೆ ಕ್ರೀಡಾಂಗಣಕ್ಕೆ ಭೇಟಿ ನೀಡಿ, ರು. 10 ಲಕ್ಷದಲ್ಲಿ ಕ್ರೀಡಾಂಗಣ ಅಭಿವೃದ್ಧಿಗೆ ಅಂದಾಜು ಪತ್ರಿಕೆ ತಯಾರಿಸುವಂತೆ ರೋಣ ಲೋಕೋಪಯೋಗಿ ಇಲಾಖೆ ಎಇಇ ಎಂ.ಬಿ. ದಾನರಡ್ಡಿ ಅವರಿಗೆ ಆದೇಶಿಸಿದರು.
ಜಿಲ್ಲೆಯಲ್ಲಿಯೇ ವಿಸ್ತೀರ್ಣವಾದ ಕ್ರೀಡಾಂಗಣ ಇದಾಗಿದ್ದು, ಇದು ಉತ್ತಮವಾದ ಪರಿಸರದಲ್ಲಿದೆ. ಇದು ಕ್ರೀಡಾಪಟುಗಳನ್ನು ಆಕರ್ಷಿಸದೇ ಅಭಿವೃದ್ಧಿಯಿಂದ ವಂಚಿತವಾಗಿದ್ದು ವಿಷಾದನೀಯ. ವಿಳಂಬ ಮಾಡದೇ ಕೂಡಲೇ ಕ್ರೀಡಾಂಗಣದಲ್ಲಿರುವ ಗಿಡಗಂಟಿ, ಹುಲ್ಲನ್ನು ತೆಗೆಯಿಸಲಾಗುವುದು ಎಂದರು.
10 ಲಕ್ಷಗಳಲ್ಲಿ ಕ್ರೀಡಾಂಗಣದಲ್ಲಿ 400 ಮೀಟರ್ ಟ್ರ್ಯಾಕ್‌ನಲ್ಲಿ ಈಗಿದ್ದ 6 ಲೈನ್‌ಗಳ ಬದಲಾಗಿ 1.22 ಮೀಟರ್ ಅಳತೆಯಂತೆ 8 ಲೈನ್‌ಗಳನ್ನು ಮಾಡುವಂತೆ, ಕಿರಿಯರ ಮತ್ತು ಹಿರಿಯರ ಕಬಡ್ಡಿ, ಕೋಕೋ ಮೈದಾನ, ಪುಟ್‌ಬಾಲ್ ಮತ್ತು ವಾಲಿಬಾಲ್ ಮೈದಾನಗಳನ್ನು ನಿರ್ಮಿಸುವಂತೆ, ಮುಂಭಾಗದ ಗೇಟ್ ರಿಪೇರಿ ಹಾಗೂ ಕ್ರೀಡಾಂಗಣದ ಸ್ವಚ್ಛತೆಗೆ ಅಗತ್ಯವಿದ್ದ ಕಾಮಗಾರಿಗಳ ಅಂದಾಜು ಪತ್ರವನ್ನು 1 ವಾರದೊಳಗೆ ತಯಾರಿಸಬೇಕು. ಹಾಗೂ ಕ್ರೀಡಾಪಟುಗಳಿಗೆ ಅಗತ್ಯವಿದ್ದ ಕ್ರೀಡಾ ಸಾಮಗ್ರಿಗಳ ಖರೀದಿಗಾಗಿಯೂ ಅಂದಾಜು ಪತ್ರಿಕೆಯನ್ನು ತಯಾರಿಸಬೇಕು ಎಂದು ತಿಳಿಸಿದರು. ಗದಗ ಜಿಲ್ಲಾ ಯುವಜನ ಸೇವೆ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ. ಶೇಖರ, ಲೋಕೋಪಯೋಗಿ ಇಲಾಖೆ ಎಂ.ಬಿ. ದಾನರಡ್ಡಿ, ತಾಲೂಕು ಯುವಜನ ಸೇವೆ ಕ್ರೀಡಾ ಇಲಾಖೆ ಪ್ರಭಾರಿ ಸಹಾಯಕ ಅಧಿಕಾರಿ ಜಗದೀಶ ಬೂದಿಹಾಳ, ಕಿರಿಯ ಅಭಿಯಂತರ ವೈ.ಎಫ್. ಬಿರನೂರ ಮುಂತಾದವರು ಉಪಸ್ಥಿತರಿದ್ದರು.