22ರಂದು ವರ್ಧಂತಿ ಮಹೋತ್ಸವ
ಗದಗ: 13 ವರ್ಷಗಳಿಂದ ಅವಳಿ ನಗರದಲ್ಲಿ ಆಷಾಢ ಮಾಸದ ಸಂದರ್ಭದಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ಹಾಗೂ ಇಷ್ಟಲಿಂಗ ಮಹಾಪೂಜೆಯ ಮೂಲಕ ಜನರಲ್ಲಿ ಆಧ್ಯಾತ್ಮ ಭಾವ ಮೂಡಿಸುವ ಕಾರ್ಯದಲ್ಲಿ ತೊಡಗಿರುವ ಕಾಶಿ ಪೀಠದ ಜ.ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳ 24ನೇ ವರ್ಷದ ಪಟ್ಟಾಧಿಕಾರ ವರ್ಧಂತಿ ಮಹೋತ್ಸವ ನ. 22 ರಂದು ಮಧ್ಯಾಹ್ನ 12ಕ್ಕೆ ಬೆಟಗೇರಿ ಶರಣಬಸವೇಶ್ವರ ನಗರದ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಪಂಚಾಚಾರ್ಯ ಸೇವಾ ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಹೇಳಿದರು.
ಅವರು ಮಂಗಳವಾರ ನಗರದ ಪಂಚಾಚಾರ್ಯ ವೇದ ಸಂಸ್ಕೃತ ಪಾಠ ಶಾಲೆಯ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವರ್ಧಂತಿ ಮಹೋತ್ಸವದ ನಿಮಿತ್ತ ಅಂದು ಬೆಳಗ್ಗೆ 8.30ಕ್ಕೆ ಇಷ್ಟಲಿಂಗ ಮಹಾಪೂಜೆ ಜರುಗುವುದು.
ಸಾನ್ನಿಧ್ಯವನ್ನು ಕಾಶಿ ಪೀಠದ ಜ.ಡಾ. ಚಂದ್ರಶೇಖರ ಶಿವಾಚಾರ್ಯ ಶ್ರೀಗಳು ವಹಿಸುವರು. ಅಡ್ನೂರ ಪಂಚಾಕ್ಷರ ಶಿವಾಚಾರ್ಯ ಶ್ರೀಗಳು, ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೊರಟೂರ ಪಕ್ಕಿರೇಶ್ವರ ಶ್ರೀಗಳು ನೇತೃತ್ವ ವಹಿಸಲಿದ್ದಾರೆ. ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಮಂಜುನಾಥ ಅಬ್ಬಿಗೇರಿ ಇವರಿಗೆ ಗುರುರಕ್ಷೆ ನೀಡಿ ಸನ್ಮಾನಿಸಲಾಗುವುದು. ಅತಿಥಿಗಳಾಗಿ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಡಿ.ಆರ್. ಪಾಟೀಲ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ಪಂಚಾಚಾರ್ಯ ಮಾಂಗಲ್ಯ ಮಂದಿರದ ಕಾರ್ಯಾಧ್ಯಕ್ಷ ಬಸಣ್ಣ ಮಲ್ಲಾಡದ ಪಾಲ್ಗೊಳ್ಳುವರು. ರಾಜಗುರು ಗುರುಸ್ವಾಮಿ ಕಲಕೇರಿ ಇವರಿಂದ ವಿಶೇಷ ಉಪನ್ಯಾಸ ಜರುಗುವುದು ಎಂದರು.
ಪಂಚಾಚಾರ್ಯ ವೇದ ಸಂಸ್ಕೃತ ಪಾಠಶಾಲೆಯ ಕಾರ್ಯಾಧ್ಯಕ್ಷ ಸಿದ್ಧಲಿಂಗಪ್ಪ ಚಳಗೇರಿ, ಅಖಿಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭೆಯ ಕಾರ್ಯಕಾರಣಿ ಸದಸ್ಯ ವಿ.ಕೆ. ಗುರುಮಠ, ವೀರೆಶ ಕೂಗು, ವೀರಭದ್ರಯ್ಯ ಧನ್ನೂರಹಿರೇಮಠ, ಬೆಟದಯ್ಯ ಹಿರೇಮಠ, ಸಿ.ಜಿ. ಅಬ್ಬಿಗೇರಿ ಹಿರೇಮಠ, ವಿಜಯಕುಮಾರ ಹಿರೇಮಠ, ಬಿ.ಎಸ್. ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.