ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಯೋಜನೆ ಸಹಕಾರಿ: ಲೋಹಿತ್
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 19
ನಾಡಿನ ಬಡ ಮತ್ತು ದುರ್ಬಲ ಸಮುದಾಯಗಳು ಆರ್ಥಿಕ ಮತ್ತು ಸಾಮಾಜಿಕವಾಗಿ ಸ್ವಾವಲಂಬನೆ ಬದುಕು ಸಾಗಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗಳು ಸಂಜೀವಿನಿಯಾಗಿವೆ. ಈ ನಿಟ್ಟಿನಲ್ಲಿ ಸ್ವಸಹಾಯ ಸಂಘಗಳ ಮೂಲಕ ಯೋಜನೆಯ ಲಾಭ ಪಡೆದು ಆರ್ಥಿಕವಾಗಿ ಸಬಲರಾಗಿ ಎಂದು ವಲಯ ಸೇವಾ ಮೇಲ್ವಿಚಾರಕ ಎಚ್. ಲೋಹಿತ್ ಹೇಳಿದರು.
ಈಚೆಗೆ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬ ಮಹೋತ್ಸವ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನ ಚೆಕ್ ವಿತರಿಸಿ ಅವರು ಮಾತನಾಡಿದರು.
ಧಾರ್ಮಿಕ ಸೇವೆ ಜತೆಗೆ ಕಳೆದ 3 ದಶಕದಿಂದ ನಾಡಿನಾದ್ಯಂತ ಕ್ಷೇತ್ರದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಗ್ರಾಮೀಣ ಪರಿವರ್ತನಾ ಕಾರ್ಯಕ್ರಮದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಆರ್ಥಿಕವಾಗಿ ಸಬಲರನ್ನಾಗಿಸುವ ಹೆಗಡೆಯವರ ಕಾಯಕ ದೇಶದ ಗಮನ ಸೆಳೆದಿದೆ. ಆಧುನಿಕ ತಂತ್ರಜ್ಞಾನದ ಭರಾಟೆಗೆ ಸಿಲುಕಿ ಇತಿಹಾಸ ಪುಟಕ್ಕೆ ಸೇರುತ್ತಿರುವ ಕೃಷಿ, ಗುಡಿ ಕೈಗಾರಿಕೆಯಂತಹ ಕಾಯಕವನ್ನು ಉಳಿಸಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಸ್ಥೆ ಯಶಸ್ಸು ಕಂಡಿದೆ ಎಂದರು.
ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಷ್ಪಾವತಿ ಭಾಂಡಗೆ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿಜಯ ಮಹಾಂತೇಶ ಸ್ವಸಹಾಯ ಸಂಘದ ಸದಸ್ಯೆ ರಾಜೇಶ್ವರಿ ಹೂಗಾರ ಪುತ್ರಿ ಐಶ್ವರ್ಯ ಹೂಗಾರಗೆ ಹಾಗೂ ಕಾವೇರಿ ಸ್ವಸಹಾಯ ಸಂಘದ ದ್ಯಾಮಣ್ಣರಿಗೂ ಸುಜ್ಞಾನಿಧಿ ಶಿಶ್ಯ ವೇತನ ಮಂಜೂರಾತಿ ಪತ್ರ ವಿತರಿಸಿದರು. ಶಿಲ್ಪಾ ತಳವಾರ, ಶಿಲ್ಪಾ ಜಾನಾಯಿ ಮುಂತಾದವರು ಉಪಸ್ಥಿತರಿದ್ದರು.