ಹುಲಕೋಟಿ: ಬಿಟಿ ಹತ್ತಿ ಬೆಳೆ ಪ್ರಾತ್ಯಕ್ಷಿಕೆ
ಗದಗ: ಸಮೀಪದ ಹುಲಕೋಟಿ ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ ಈಚೆಗೆ 2013-14ನೇ ಸಾಲಿನ ಮುಂಚೂಣಿ ಪ್ರಾತ್ಯಕ್ಷಿಕೆ ಯೋಜನೆಯಡಿ ಗದಗ ತಾಲೂಕಿನ ಶಿರುಂಜ ಗ್ರಾಮದಲ್ಲಿನ 10 ರೈತರ ಹೊಲಗಳಲ್ಲಿ ಬಿ.ಟಿ. ಹತ್ತಿ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣಾ ಪದ್ಧತಿಗಳ ಪ್ರಾತ್ಯಕ್ಷಿಕೆ ಯಶಸ್ವಿಯಾಗಿ ಜರುಗಿತು.
ಬಿ.ಟಿ. ಹತ್ತಿ ಬೆಳೆಯಲ್ಲಿ ರಸಹೀರುವ ಕೀಟ ಬಾಧೆಯಿಂದ ಹಾಗೂ ಅಸಮತೋಲನ ಗೊಬ್ಬರ ಬಳಕೆಯಿಂದ ಉತ್ಪಾದಕತೆ ಕುಂಠಿತಗೊಂಡಿದ್ದು, ರೈತರು ಸರಿಯಾದ ಸಮಯದಲ್ಲಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಹಾಗೂ ಸಮತೋಲನ ಗೊಬ್ಬರಗಳ ಬಳಕೆಯನ್ನು ಕೈಗೊಳ್ಳಬೇಕೆಂಬುದರ ಕುರಿತು ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಎಸ್.ಕೆ. ಮುದ್ಲಾಪುರ ತಿಳಿಸಿದರು. ಬಿ.ಟಿ. ಹತ್ತಿ ಬೆಳೆಯನ್ನು ಬಾಧಿಸುವ ಮಿರಿಡ್ ಬಗ್ ಹಾಗೂ ಮಿಡ್ಜ್ ಕೀಟಗಳ ನಿಯಂತ್ರಣ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಸಾನ್ನಿಧ್ಯ ವಹಿಸಿದ್ದ ಶಿರುಂಜ ಗ್ರಾಮದ ಜ್ಞಾನ ಯೋಗಾಶ್ರವುದ ಬಸವ ಸಮರ್ಥ ಅಪ್ಪನವರು ಮಾತನಾಡಿ, ರೈತರು ಮಣ್ಣು ಮತ್ತು ನೀರು ಸಂರಕ್ಷಣೆ ಜತೆಗೆ ಪರಿಸರ ಸ್ನೇಹಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಎಸ್.ವಿ. ಚೇಗರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೈತರಾದ ಶಿವಾನಂದಪ್ಪ ಬೆಂತೂರು, ಸುಭಾಸಚಂದ್ರ ಗುಡ್ಡದ, ಚಂದ್ರಪ್ಪ ಕಪ್ಪತ್ತನವರ, ದೇವಪ್ಪ ಮಳ್ಳಣ್ಣವರ, ನವೀನ ಹುಡೇದ, ಜಗದೀಶ ಕಬಾಡರ, ಬಸಪ್ಪ ಅರಳಿಕಟ್ಟಿ ಹಾಗೂ ಇನ್ನಿತರ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಎಸ್.ಎಚ್. ಆದಾಪುರ ಪ್ರಾತ್ಯಕ್ಷಿಕೆಯ ಉದ್ದೇಶ ಹಾಗೂ ಮಹತ್ವದ ಬಗ್ಗೆ ತಿಳಿಸಿದರು. ಎನ್.ಎಚ್. ಭಂಡಿ ವಂದಿಸಿದರು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.