ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೆರೆ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ. ನ. 20
ಸ್ಥಳೀಯ ಬೆಟ್ಟದಿಂದ ಹರಿದು ಪೋಲಾಗುವ ಮಳೆ ನೀರನ್ನು ತಡೆಹಿಡಿಯುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆ ಅಂದಾಜು ರು. 6 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಕೆರೆಗೆ ತಡೆಗೋಡೆ ಜತೆಗೆ ಸೂಕ್ತ ನಿರ್ವಹಣೆ ಇಲ್ಲದಿರುವುದರಿಂದ ಕೆರೆ ಅಪಾಯದ ತಾಣವಾಗಿ ಮಾರ್ಪಟ್ಟಿರುವುದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ.
ಮಳೆಗಾಲ ಸಂದರ್ಭದಲ್ಲಿ ಬೆಟ್ಟದಿಂದ ರಭಸವಾಗಿ ಹರಿದು ಬರುವ ಮಳೆ ನೀರು ವಾಜಪೇಯಿ ಬಡಾವಣೆ, ಶಿವಾಜಿ ಪೇಟೆ, ಅಡೇಕಾರ ಗಲ್ಲಿ, ಹಿರೇಬಜಾರ್, ನೇಕಾರ ಕಾಲೋನಿ, ಜನತಾ ಕಾಲೋನಿ, ಜಿ.ಎಸ್. ಪಾಟೀಲ ಬಡಾವಣೆ ಹಾಗೂ ಉಣಚಗೇರಿ ಭಾಗದಲ್ಲಿ ವಾಸಿಸುವ ಕುಟುಂಬಗಳ ಮನೆಗಳಿಗೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿ ತೀವ್ರ ತೊಂದರೆಯನ್ನುಂಟು ಮಾಡುತ್ತಿರುವುದನ್ನು ಗಮನಿಸಿದ ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಸಣ್ಣ ನೀರಾವರಿ ಇಲಾಖೆಯಿಂದ ಕೆರೆ ನಿರ್ಮಿಸಲಾಗಿದೆ. ಇದು ಜನರಲ್ಲಿ ಸಂತಸ ತಂದಿದೆ. ಅಲ್ಲದೇ ರೈತರಿಗೂ ಅನುಕೂಲವಾಗಿದೆ.
ಕೊಳವೆಬಾವಿಗಳ ಅಂತರ್ಜಲ ಹೆಚ್ಚುವ ವಿಶ್ವಾಸ: ಬೆಟ್ಟದ ಕೆಳ ಭಾಗದ 73 ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಕೆರೆ ನಿರ್ಮಿಸಿ, ತಡೆಗೋಡೆ ಮೂಲಕ ಶೇಖರಿಸಿದ ಮಳೆ ನೀರು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ನೂರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವುದು ಯೋಜನೆಯ ಉದ್ದೇಶ ಸಫಲವಾಗುತ್ತಿದೆ. ಈ ಬಾರಿ ಸುರಿದ ಮಳೆಯಿಂದಾಗಿ ಕೆರೆಯಲ್ಲಿ ಸಂಗ್ರಹವಾದ ನೀರಿನಿಂದಾಗಿ ಕೆರೆಯ ಸುತ್ತಲಿನ ರೈತರ ಜಮೀನಿನಲ್ಲಿ ಕೊರೆದ ಕೊಳವೆ ಬಾವಿಗಳಲ್ಲಿ ಕಡಿಮೆಯಾಗಿದ್ದ ಅಂತರ್ಜಲಮಟ್ಟ ಸ್ವಲ್ಪ ಹೆಚ್ಚಳವಾಗಬಹುದೆಂದು ರೈತ ಸಮುದಾಯದಲ್ಲಿ ಆಶಾಭಾವನೆ ಮೂಡಿದೆ.
ಅಂತೂ ಮುಗಿದ ಕೆರೆ ಕಾಮಗಾರಿ: ಕೆರೆ ಕಾಮಗಾರಿ ಪ್ರಾರಂಭಗೊಂಡು 6-7 ವರ್ಷ ಕಳೆದರೂ ಬೃಹತ್ ಕೆರೆ ಕಾಮಗಾರಿ ಪೂರ್ಣಗೊಳ್ಳದಿರುವುದು ಜನರಲ್ಲಿ ಬೇಸರ ಮೂಡಿಸಿತ್ತು. ಒಂದೆಡೆ ಜಮೀನು ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ಸಿಗದಿರುವುದು, ಇನ್ನೊಂದೆಡೆ ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದು ಹೀಗೆ ಹಲವಾರು ವಿಘ್ನಗಳ ಮಧ್ಯೆಯು ಬೃಹತ್ ಕೆರೆ ನಿರ್ಮಾಣ ಕಾಮಗಾರಿ ಮುಗಿದು ಜನ ಸೇವೆಗೆ ಸಮರ್ಪಣೆಯಾಗಿದೆ. ಈಗ ಕೆರೆಯಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗಿರುವುದು ಜನತೆಗೆ ಸಮಾಧಾನ ತರುವ ಜತೆಗೆ ಸದಾ ಬರಗಾಲದ ಬವಣೆಗೆ ತುತ್ತಾಗುವ ಈ ಭಾಗದ ರೈತರ ದನ, ಕರುಗಳಿಗೆ ಕುಡಿವ ನೀರಿನ ಸಮಸ್ಯೆ ಕಡಿಮೆಯಾಗಲಿದೆ.
ತಡೆಗೋಡೆ ನಿರ್ಮಾಣಕ್ಕೆ ಆಗ್ರಹ: ಪಟ್ಟಣದ ಜನತೆಯ ದಶಕದ ಕನಸಾಗಿದ್ದ ಬೃಹತ್ ಕೆರೆ ನಿರ್ಮಾಣ ಕಾರ್ಯ ಮುಗಿದು ಜನರ ಸೇವೆಗೆ ಸಮರ್ಪಣೆಯಾಗಿರುವುದು ಜನರಲ್ಲಿ ಸಂತಸ ಮೂಡಿಸಿದರೆ, ಇನ್ನೊಂದೆಡೆ ಬೃಹತ್ ಕೆರೆಯ ಸುತ್ತಲು ತಡೆಗೋಡೆ ನಿರ್ಮಿಸದಿರುವುದರಿಂದ ಚಿಕ್ಕ ಮಕ್ಕಳು ಈ ಕೆರೆಯಲ್ಲಿ ಈಜಲು ತೆರಳಿ ಪ್ರಾಣ ತೆತ್ತ ಘಟನೆ ಮೇಲಿಂದ ಮೇಲೆ ನಡೆಯುತ್ತಿರುವುದು ಜನರಲ್ಲಿ ಭಯವನ್ನುಂಟುಮಾಡಿದೆ. ಇಂತಹ ಘಟನೆ ಪದೇಪದೇ ನಡೆಯುತ್ತಿದ್ದರೂ ಎಚ್ಚೆತ್ತುಕೊಳ್ಳದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸ್ಥಳೀಯ ಗುಡ್ಡದ ಬಳಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಿರುವ ಬೃಹತ್ ಕೆರೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ಮಳೆ ನೀರು ಸಂಗ್ರಹವಾಗಿದೆ. ಮಕ್ಕಳು ಈಜಲು ಹೋಗಿ ಪ್ರಾಣ ಕಳೆದುಕೊಂಡ ಘಟನೆ ನಡೆದ ಬಳಿಕ ಪುರಸಭೆಯ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಪುರಸಭೆ ವತಿಯಿಂದ ಕೆರೆ ದಡದಲ್ಲಿ ತಡೆಗೋಡೆ ನಿರ್ಮಿಸಿ ಅಪಾಯದ ಸ್ಥಳ ಎಂದು ನಾಮಫಲಕ ಹಾಕಲು ಠರಾವು ಮಾಡಲಾಗಿದೆ. ಆದರೆ ಪುರಸಭೆ ಅಧಿಕಾರಿಗಳು ಕಾಮಗಾರಿ ಕೈಗೊಳ್ಳುವಲ್ಲಿ ನಿರ್ಲಕ್ಷ ತೋರುತ್ತಿದ್ದಾರೆ. ಕೂಡಲೇ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
-ಕವಿತಾ ಜಾಲಿಹಾಳ
ಪುರಸಭೆ ಅದ್ಯಕ್ಷೆ
ಗುಡ್ಡದಿಂದ ಹರಿದು ಪೋಲಾಗುವ ಮಳೆ ನೀರನ್ನು ತಡೆ ಹಿಡಿಯುವ ಉದ್ದೇಶದಿಂದ ನಿರ್ಮಿಸಿರುವ ಬೃಹತ್ ಕೆರೆಯಲ್ಲಿ ಇದೀಗ ಮಳೆ ನೀರು ಸಂಗ್ರಹವಾಗಿದೆ. ಮಕ್ಕಳು ಈಜಲು ತೆರಳಿ ನೀರುಪಾಲಾದ ಘಟನೆ ಪದೇ ಪದೇ ನಡೆಯುತ್ತಿರುವುದು ವಿಷಾದನೀಯ. ಕೂಡಲೇ ಪುರಸಭೆ ವತಿಯಿಂದ ಕೆರೆಯ ಪ್ರವೇಶ ದ್ವಾರದಲ್ಲಿ ತಂತಿ ಬೇಲಿ ನಿರ್ಮಿಸಿ ಮುಂದಾಗುವ ಅನಾಹುತ ತಡೆಗಟ್ಟಲು ಪುರಸಭೆ ಆಡಳಿತ ಮುಂದಾಗಬೇಕು.
-ಎಂ.ಎಸ್. ಹಡಪದ
ಪುರಸಭೆ ಸದಸ್ಯ
-ಡಿ.ಜಿ. ಮೋಮಿನ್