ಕನಕದಾಸರ ಭಾವಚಿತ್ರ ಮೆರವಣಿಗೆಗೆ ಶಾಸಕಯಾವಗಲ್ಲ ಚಾಲನೆ
ನರಗುಂದ: ಹಲವಾರು ದಾರ್ಶನಿಕರು ಈ ನಾಡಿನಲ್ಲಿ ಬಾಳಿ ಹೋಗಿದ್ದಾರೆ. ಅಂತಹ ದಾರ್ಶನಿಕರಲ್ಲಿ ಶ್ರೇಷ್ಠರಾಗಿರುವ ದಾಸಶ್ರೇಷ್ಠ ಕನಕದಾಸರ ಆದರ್ಶಗಳು ಇಂದಿನ ಯುವಪೀಳಿಗೆಗೆ ಮಾದರಿ ಎಂದು ಶಾಸಕ ಬಿ.ಆರ್. ಯಾವಗಲ್ಲ ಹೇಳಿದರು.
ಅವರು ಬುಧವಾರ ಪಟ್ಟಣದ ಕನಕ ವೃತ್ತದಲ್ಲಿ ಕನಕದಾಸರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿ ನಂತರ ಪುರಸಭೆ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕನಕದಾಸರು ನಾಡಿನಲ್ಲಿರುವ ಅಂಧಕಾರವನ್ನು ಹೋಗಲಾಡಿಸಲು ಹಲವಾರು ಗ್ರಂಥಗಳನ್ನು ಹೊರತಂದು, ಜನತೆಯಲ್ಲಿರುವ ಜಾತಿ, ಭೇದ ಕಿತ್ತುಹಾಕಲು ಹಗಲಿರುಳು ಶ್ರಮಿಸಿದ ಮಹಾನ್ ಸಂತರಾಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಶ್ರೇಷ್ಠ ದಾರ್ಶನಿಕರ ಆಚರಣೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗುತ್ತಿರುವುದು ನೋವಿನ ಸಂಗತಿ. ಕನಕದಾಸರ ಜಯಂತಿಯನ್ನು ಎಲ್ಲ ಸಮಾಜ ಬಾಂಧವರು ಆಚರಿಸುವಂತಾಗಬೇಕು. ಅಂದಾಗ ಮಾತ್ರ ಕನಕದಾಸರ ಜಯಂತ್ಯುತ್ಸವಕ್ಕೆ ಬೆಲೆ ಬರಲು ಸಾಧ್ಯ ಎಂದರು.
ಬನಹಟ್ಟಿ ಸರ್ಕಾರಿ ಕಾಲೇಜಿನ ಉಪನ್ಯಾಸಕ ಎಚ್.ಬಿ. ಅಸೂಟಿ ಮಾತನಾಡಿದರು. ತಾಪಂ ಅಧ್ಯಕ್ಷ ಗುರಪ್ಪ ಆದಪ್ಪನವರ, ಜಿಪಂ ಸದಸ್ಯ ಎಂ.ಎಸ್. ಪಾಟೀಲ, ದ್ಯಾಮಣ್ಣ ಸವದತ್ತಿ, ಎಂ.ಎಂ. ಮುಳ್ಳೂರ, ಫಕೀರಪ್ಪ ಸದವತ್ತಿ, ಪುಂಡಲೀಕಪ್ಪ ಹುಲಜೋಗಿ, ಹನುಮಂತ ಶಿಂಧೆ, ಎಸ್.ಬಿ.ದಂಡಿನ, ದ್ಯಾಮಣ್ಣ ಕಾಡಪ್ಪನವರ, ಚಂದ್ರು ದಂಡಿನ, ತಹಸೀಲ್ದಾರ್ ಬಿ.ಬಿ. ನೀಲಣ್ಣವರ, ತಾಪಂ ಅಧಿಕಾರಿ ನಂದಕುಮಾರ ಗುಂಡಾ ಮುಂತಾದವರು ಉಪಸ್ಥಿತರಿದ್ದರು.