ಖಾಸಗಿ ವಾಹನಗಳ ಕಾರುಬಾರು
ಕನ್ನಡಪ್ರಭ ವಾರ್ತೆ, ನರಗುಂದ, ನ. 21
ಗದಗ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ತಾಲೂಕು ಎಂಬ ಹೆಗ್ಗಳಿಕೆ ಹೊಂದಿರುವ ನರಗುಂದದಲ್ಲಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಸಮೀಪದಲ್ಲಿ ಸಾಕಷ್ಟು ಖಾಸಗಿ ವಾಹನಗಳ ಹಾವಳಿ ಹೆಚ್ಚಿದೆ. ಸಾರಿಗೆ ಸಂಸ್ಥೆಗೆ ಸೇರಿದ ಬಸ್ಗಳಲ್ಲಿನ ಪ್ರಯಾಣಿಕರನ್ನೇ ಕರೆದುಕೊಂಡು ಹೋಗುವಷ್ಟು ಖಾಸಗಿ ವಾಹನವುಳ್ಳವರು ಮುಂದುವರಿದಿದ್ದರೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾತ್ರ ನಿದ್ರೆಗೆ ಜಾರಿದ್ದು, ಇದು ಸಂಸ್ಥೆಯ ನಷ್ಟಕ್ಕೆ ಇವರೇ ಕಾರಣರಾದಂತಾಗಿದೆ.
ಪಟ್ಟಣದ ಬಸ್ ನಿಲ್ದಾಣದ ಸುತ್ತಲೂ 100 ಮೀಟರ್ ಆವರಣದಲ್ಲಿ ಯಾವುದೇ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುವಂತಿಲ್ಲ. ನಿಲುಗಡೆ ಮಾಡಿದರೂ ಆ ಕುರಿತು ಮೊದಲೇ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಪರವಾನಗಿ ಪಡೆಯಬೇಕು. ಆದರೆ, ಖಾಸಗಿ ವಾಹನಗಳ ಮಾಲೀಕರು ಇದ್ಯಾವುದಕ್ಕೂ ಕ್ಯಾರೇ ಎನ್ನದೇ ನಿಲ್ದಾಣದ ಆವರಣದಲ್ಲಿಯೇ ರಾಜಾರೋಷವಾಗಿ ವಾಹನಗಳನ್ನು ಸಂಚರಿಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳು ಮಾತ್ರ ತೆಪ್ಪಗೆ ಕುಳಿತಿದ್ದು ಚರ್ಚೆಗೆ ಕಾರಣವಾಗಿದೆ.
ಜಾತ್ರೆಗಳ ವೇಳೆ ಜೋರು: ಈ ಭಾಗದ ಪ್ರಸಿದ್ಧ ದೇವಸ್ಥಾನಗಳಾದ ಸವದತ್ತಿ ತಾಲೂಕಿನ ಯಲ್ಲಮ್ಮದೇವಿ ಜಾತ್ರೆ, ಬಾದಮಿ ತಾಲೂಕಿನ ಬನಶಂಕರಿ ದೇವಿ ಜಾತ್ರೆ, ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರಶ್ವರ ಜಾತ್ರೆ, ನವಲಗುಂದ ತಾಲೂಕಿನ ಅಮರಗೋಳದ ನಾಗಲಿಂಗೇಶ್ವರ ಜಾತ್ರೆಗಳ ಸಂದರ್ಭದಲ್ಲಿ ಬಸ್ ನಿಲ್ದಾಣದೊಳಗೆ ಕೆಲವು ಖಾಸಗಿ ಏಜೆಂಟರು ಬಂದು ಬಸ್ಗಳಿಗೆ ಹೋಗುವುದು ತಡವಾಗುತ್ತದೆ ಎಂದು ಸಾರ್ವಜನಿಕರನ್ನು ಪುಸಲಾಯಿಸಿ ಕರೆದುಕೊಂಡು ಹೋಗುತ್ತಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಲಕ್ಷಾಂತರ ಹಣ ನಷ್ಟವಾಗುತ್ತಿದೆ.
ಸರ್ಕಾರಿ ವಾಹನ ಖಾಲಿಖಾಲಿ: ಕೇವಲ ಜಾತ್ರೆ ಸಮಯದಲ್ಲಿ ಮಾತ್ರವಲ್ಲ, ಇನ್ನುಳಿದ ಸಮಯದಲ್ಲಿಯೂ ಖಾಸಗಿ ವಾಹನಗಳ ಹಾವಳಿ ನರಗುಂದಲ್ಲಿ ವ್ಯಾಪಕವಾಗಿದ್ದು, ಮುಂದೆ ಖಾಸಗಿ ವಾಹನಗಳು ತುಂಬಿ ಹೋಗುತ್ತಿದ್ದರೆ, ಅವುಗಳ ಹಿಂದೆ ಸಾರಿಗೆ ಸಂಸ್ಥೆಯ ಬಸ್ಗಳು ಖಾಲಿ ಖಾಲಿ ಸಂಚರಿಸುತ್ತಿವೆ. ಇದರಿಂದ ಸಂಸ್ಥೆಗೆ ಸಾಕಷ್ಟು ಹಾನಿಯಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಇದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇದರ ಬಗ್ಗೆ ಗಮನಹರಿಸುವುದು ಅವಶ್ಯಕವಿದೆ. ನಿಲ್ದಾಣದ ಸುತ್ತಲೂ ಯಾವುದೇ ಖಾಸಗಿ ವಾಹನಗಳ ನಿಲುಗಡೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವುದರಿಂದ ಪ್ರಯಾಣಿಕರಿಗೂ ಅನುಕೂಲ ಹಾಗೂ ಸಂಸ್ಥೆಯೂ ಲಾಭದತ್ತ ಸಾಗುತ್ತದೆ.
ಹಲವಾರು ಅಪಘಾತ ಸಂಭವಿಸಿವೆ: ಬಸ್ ನಿಲ್ದಾಣದ ಸಮೀಪದಲ್ಲಿಯೇ ಸಾಕಷ್ಟು ಖಾಸಗಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ (ಹೆದ್ದಾರಿ ಪಕ್ಕದಲ್ಲಿ) ಅಲ್ಲಿ ನಿಲುಗಡೆ ಮಾಡುವ ವಾಹನಗಳಿಗೆ ಹತ್ತಲು, ಇಳಿಯಲು ಪ್ರಯಾಣಿಕರು ಹೆದ್ದಾರಿ ದಾಟಬೇಕಾಗುತ್ತದೆ. ಸೊಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ (ಹೆದ್ದಾರಿ ನಂ. 218) ಸಾಕಷ್ಟು ವಾಹನ ದಟ್ಟಣೆ ಇರುತ್ತದೆ. ದೂರದಿಂದ ಬರುವ ವಾಹನಗಳು ವೇಗವಾಗಿ ಸಂಚರಿಸುತ್ತವೆ. ಇದರ ಮಧ್ಯೆ ಸಾರ್ವಜನಿಕರು ರಸ್ತೆ ದಾಟುವುದರಿಂದ ಹಲವು ಬಾರಿ ರಸ್ತೆ ಅಪಘಾತಗಳು ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ.
ನಿಲ್ದಾಣದ ಒಳಗಡೆ ಬಂದು ಬಸ್ಗಳಲ್ಲಿ ಇರುವ ಪ್ರಯಾಣಿಕರನ್ನು ಚಾಲಕ-ನಿವಾರ್ಹಕರ ಎದುರಿನಲ್ಲಿಯೇ ಖಾಸಗಿ ವಾಹನಗಳ ಏಜೆಂಟರ್ ಕರೆದುಕೊಂಡು ಹೋದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಇದರಿಂದ ಇವರು ಕೂಡಾ ಖಾಸಗಿ ವಾಹನದವರ ಜತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ. ಈ ಕುರಿತು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಅಧಿಕಾರಿಗಳು ನರಗುಂದಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಇದಕ್ಕೆಲ್ಲ ಕಡಿವಾಣ ಹಾಕಬೇಕು.
-ಅಶೋಕ ಶೆಳಕೆ, ಚನ್ನು ನಂದಿ
ಹೋರಾಟಗಾರರು
ಖಾಸಗಿ ವಾಹನದವರು ನಮ್ಮ ನಿಲ್ದಾಣದ ಸಮೀಪದಲ್ಲಿಯೇ ವಾಹನಗಳನ್ನು ನಿಲುಗಡೆ ಮಾಡುವುದರಿಂದ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಈ ಹಿಂದೆ ನಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಆದರೂ ಖಾಸಗಿಯವರು ನಿಲ್ದಾಣದ ಸುತ್ತಲೂ ತಮ್ಮ ವಾಹನಗಳನ್ನು ನಿಲ್ಲಿಸುವುದನ್ನು ಮುಂದುವರಿಸಿದ್ದಾರೆ. ಅದಕ್ಕೆ ಆದಷ್ಟು ಬೇಗನೇ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು.
-ದೀಪಕ ಜಾಧವ
ಡಿಪೊ ಮ್ಯಾನೇಜರ್, ನರಗುಂದ
- ಎಸ್.ಜಿ. ತೆಗ್ಗಿನಮನಿ