ಜನಪ್ರತಿನಿಧಿಗಳ ಅವಮಾನಿಸಿದವರ ಮೇಲೆ ಕ್ರಮಕೈಗೊಳ್ಳಿ: ಹಾವಿನಾಳ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 21
ಅನೇಕ ವರ್ಷಗಳಿಂದ ಮುಂಡರಗಿ ತಾಲೂಕು ಸೇರಿದಂತೆ ಅನೇಕ ಸಹಕಾರ ಸಂಘಗಳು ಮತ್ತು ಹಾಲಿನ ಸೊಸೈಟಿಗಳು, ಎಪಿಎಂಸಿಗಳು ಗದಗ ಜಿಪಂ ಅನುದಾನದಿಂದ ಸಹಾಯಧನ ಮತ್ತು ಅನುದಾನಗಳನ್ನು ಪಡೆಯುತ್ತಾ ಬಂದಿದ್ದು, ಇತ್ತೀಚಿಗೆ ಮುಂಡರಗಿ ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಜರುಗಿದ ಸಹಕಾರ ಸಪ್ತಾಹ ಕಾರ್ಯಕ್ರಮಗಳಲ್ಲಿ ಜಿಪಂ ಸದಸ್ಯರನ್ನು ಆಹ್ವಾನಿಸದೇ ಜನಪ್ರತಿನಿಧಿಗಳನ್ನು ಅವಮಾನಿಸಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಹಾಗೂ ಕಾರ್ಯಕ್ರಮ ಆಯೋಜಿಸಿದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಹಮ್ಮಿಗಿ ಕ್ಷೇತ್ರದ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಒತ್ತಾಯಿಸಿದ್ದಾರೆ.
ಈ ಕುರಿತು ತಿಳಿಸಿರುವ ಅವರು, ಇತ್ತೀಚಿಗೆ ಕೆಲವು ಇಲಾಖೆ ಅಧಿಕಾರಿಗಳು ಸಂಬಂಧಪಟ್ಟ ಜನಪ್ರತಿನಿಧಿಗಳನ್ನು ಸಭೆ-ಸಮಾರಂಭ ಮತ್ತು ಶಾಸಕರ ಹಾಗೂ ಸಚಿವರ ಕಾರ್ಯಕ್ರಮಗಳಿಗೆ ಆಹ್ವಾನ ಮತ್ತು ಅದರ ಕುರಿತು ತಮಗೆ ಮಾಹಿತಿ ನೀಡುತ್ತಿಲ್ಲ.
ಹಾವಿನಾಳ ಅವರು ಬೇರೆ ಪಕ್ಷದವರೆಂಬ ದುರುದ್ದೇಶದಿಂದಲೇ ತಮ್ಮನ್ನು ಕಾರ್ಯಕ್ರಮಗಳಿಗೆ ಆಮಂತ್ರಣ ನೀಡುತ್ತಿಲ್ಲ. ಜಿಪಂದಿಂದ ಬರುವ ಸಾಕಷ್ಟು ಅನುದಾನವನ್ನು ಪಡೆದು ಜಿಪಂ ಸದಸ್ಯರನ್ನು ಕಡೆಗಣಿಸಿದ್ದು, ದುರುದ್ದೇಶದ ಪರಮಾವಧಿಯಾಗಿದೆ. ಕಳೆದ ಜೂನ್ 15 ಮತ್ತು 16 ರಂದು ಮುಂಡರಗಿಯಲ್ಲಿ ಜರುಗಿದ 5ನೇ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚದ ಕುರಿತು ಕಸಾಪದ ಜಿಲ್ಲಾ ಅಧ್ಯಕ್ಷರು ಮತ್ತು ತಾಲೂಕು ಅಧ್ಯಕ್ಷರು ಇದುವರೆಗೂ ಸಭೆ ಕರೆದು ಸಾರ್ವಜನಿಕರಿಗೆ ನೀಡಿಲ್ಲ. ಸಮ್ಮೇಳನಕ್ಕಾಗಿ ತಾಲೂಕಿನ ಸಾರ್ವಜನಿಕರಿಂದ, ವ್ಯಾಪಾರಸ್ಥರಿಂದ, ನೌಕರರಿಂದ, ಅನೇಕ ಸಂಘ ಸಂಸ್ಥೆಗಳಿಂದ ದೊಡ್ಡ ಮೊತ್ತದಲ್ಲಿ ದೇಣಿಗೆ ಪಡೆದುಕೊಂಡಿದ್ದು, ಸಮ್ಮೇಳನ ಮುಗಿದು 5 ತಿಂಗಳು ಕಳೆದರೂ ಇದುವರೆಗೂ ಸಮ್ಮೇಳನಕ್ಕೆ ಕೂಡಿದ ಒಟ್ಟು ಹಣ, ಮಾಡಿದ ಖರ್ಚು, ಉಳಿದ ಮೊತ್ತದ ಕುರಿತು ಯಾವುದೇ ತೆರನಾದ ಲೆಕ್ಕಪತ್ರವನ್ನು ನೀಡಿಲ್ಲ. ಈ ಕೂಡಲೇ ಸಾರ್ವಜನಿಕರ ಸಭೆ ಕರೆದು ಸಮ್ಮೇಳನದ ಸಂಪೂರ್ಣ ಲೆಕ್ಕಪತ್ರಗಳನ್ನು ಸಾದರಪಡಿಸಬೇಕು.
ಒಂದು ವೇಳೆ ಸಭೆ ಕರೆದು ಲೆಕ್ಕಪತ್ರ ನೀಡದೇ ಹೋದಲ್ಲಿ ಸಮ್ಮೇಳನಕ್ಕಾಗಿ ಸಾರ್ವಜನಿಕರು, ಸಾಹಿತ್ಯಾಸಕ್ತರು, ನೌಕರ ವರ್ಗದವರು ನೀಡಿದ ಹಣ ವ್ಯಯವಾಗಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಹೇಮಗಿರೀಶ ಹಾವಿನಾಳ, ದೇವಪ್ಪ ಕಂಬಳಿ, ಬಸವರಾಜ ಮುಂಡವಾಡ, ಪರಮೇಶಪ್ಪ ಗೋಣೆನ್ನವರ, ಈರಣ್ಣ ಮಜ್ಜಗಿ, ಶ್ರೀಕಾಂತಗೌಡ ಪಾಟೀಲ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--
ಮಕ್ಕಳಿಗೆ ಉಚಿತ ಕ್ಷೌರ, ನೋಟ್ಬುಕ್ ವಿತರಣೆ
ಗದಗ: ಸಮಾಜದಲ್ಲಿ ಸುಂಸ್ಕೃತರಾಗಿ ಬದುಕಲು ವಿದ್ಯೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರೂ ಗುಣಮಟ್ಟದ ಶಿಕ್ಷಣ ಪಡೆದು ತಮ್ಮ ಜೀವನವನ್ನು ಸುಖಕರವಾಗಿಟ್ಟುಕೊಳ್ಳುವಂತೆ ಕ್ಷೌರಿಕ ಸಮಾಜದ ಹಿರಿಯ ಹನುಮಂತಪ್ಪ ರಾಂಪುರ ಹೇಳಿದರು. ಅವರು ಈಚೆಗೆ ಗಂಗಾಪುರ ಪೇಟೆಯ ಗುಡ್ಲಕ್ ಹೇರ್ ಕಟಿಂಗ್ ಸಲೂನ್ನಲ್ಲಿ ಜವಾಹರಲಾಲ್ ನೆಹರು ಅವರ ಜನ್ಮದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದ್ದ ಉಚಿತ ಕ್ಷೌರ ಕಾರ್ಯಕ್ರಮ ಹಾಗೂ ನೋಟ್ಬುಕ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಶುರಾಮ ಕೊಟೇಕಲ್ಲ ಹಾಗೂ ಶಂಕರ ಮಾನೆ ಮಾತನಾಡಿ, ಕ್ಷೌರಿಕ ಸಮಾಜದ ಯುವ ಮುಖಂಡ ಕೃಷ್ಣ ಹಡಪದ ಅವರು ಮಕ್ಕಳ ಆರೋಗ್ಯ ಮತ್ತು ಶುಚಿತ್ವಕ್ಕೆ ಒತ್ತು ಕೊಡುವ ಇಂತಹ ಕಾರ್ಯಕ್ರಮ ಮಾಡಿರುವುದು ಇತರರಿಗೆ ಮಾದರಿಯಾಗಿದೆ ಎಂದರು. ರಾಜು ಮಾನೆ, ಪರಶುರಾಮ ಕೊಟೇಕಲ್ಲ, ದೀಪಕ ಮಾನೆ, ಶಂಕರ ಮಾನೆ, ಪಾಂಡು ಕಾಳೆ, ಹನುಮಂತ ರಾಂಪುರ, ಸುರೇಶ ಬೂದುರು, ಜಂಬಣ್ಣ ಕಡಮೂರ, ಪರಶುರಾಮ ಅಣ್ಣಿಗೇರಿ, ವಿನಾಯಕ ಕ್ಷೀರಸಾಗರ, ಗಣೇಶ ಕಡಮೂರ, ಗೋವಿಂದರಾಜ ಕರ್ನೂಲ್, ನಾಗರಾಜ ಆರೇಪಲ್ಲಿ, ಕೃಷ್ಣ ಹಡಪದ ಮುಂತಾದವರು ಉಪಸ್ಥಿತರಿದ್ದರು. ಪಾಂಡು ಕಾಳೆ ಸ್ವಾಗತಿಸಿದರು. ದೀಪಕ ಮಾನೆ ನಿರೂಪಿಸಿದರು. ವಿಶಾಲ ಮಾನೆ ವಂದಿಸಿದರು.