ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ನಾಡನ್ನಾಳುವವರಲ್ಲಿರಲಿ ಕನ್ನಡಾಭಿಮಾನ

Lingaraj Badiger
Updated On : 22 Nov 2013, 11:51 am

ಕನ್ನಡಪ್ರಭ ವಾರ್ತೆ, ಗದಗ, ನ. 21
ನಾಡಿನ ಕನ್ನಡಿಗರು ಹೊಂದಿರುವ ಕನ್ನಡಾಭಿಮಾನಕ್ಕಿಂತ ನಾಡನ್ನಾಳುವ ಮಂತ್ರಿಮಹೋದಯರಲ್ಲಿನ ಕನ್ನಡಾಭಿಮಾನ, ಕನ್ನಡ ಸಾಹಿತ್ಯಾಭಿಮಾನ ಹೆಚ್ಚು ಪ್ರಭಾವಶಾಲಿ ಪಾತ್ರ ವಹಿಸಬಲ್ಲದು. ಇದರಿಂದ ರಾಜ್ಯದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯ ಬೆಳವಣಿಗೆಗೆ ನಿಜವಾದ ಶಕ್ತಿ ಬರುತ್ತದೆ ಎಂದು ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು.
ಅವರು ಈಚೆಗೆ ಜ. ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ಕನ್ನಡ ತಿಂಗಳು ರಾಜ್ಯೋತ್ಸವ ಮಾಸಾಚರಣೆ ಅಂಗವಾಗಿ ನಡೆದ 2146ನೇ ಶಿವಾನುಭವ ಕವಿ ಕಾವ್ಯದರ್ಶನ ಉಪನ್ಯಾಸ-ಕಿರುಚಿತ್ರ ಪ್ರದರ್ಶನ-ಕನ್ನಡ ಗೀತ ಗಾಯನ ಹಾಗೂ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ನಾಡಿನ ಆಡಳಿತ, ಜನಕಲ್ಯಾಣದ ಶಕ್ತಿ ಕೇಂದ್ರವಾದ ವಿಧಾನಸೌಧದಿಂದಲೂ ಹೊರಹೊಮ್ಮಬೇಕು. ಇದಕ್ಕೆ ಮಂತ್ರಿಗಳಾದವರಲ್ಲಿ ಮೊದಲೇ ಕನ್ನಡಾಭಿಮಾನ, ಕನ್ನಡ ಸಾಹಿತ್ಯಾಭಿರುಚಿ ಇದ್ದರಂತೂ ಕನ್ನಡ ಇನ್ನಷ್ಟು ಪ್ರಖರವಾಗಿ ಬೆಳೆದು ಬರಲು ಸಾಧ್ಯ. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತರಾಯರು ಕುಮಾರವ್ಯಾಸ ಬರೆದ ಗದುಗಿನ ಭಾರತವನ್ನು ಸರ್ಕಾರದಿಂದಲೇ ಮುದ್ರಿಸಿ ಜನತೆಗೆ ಕೇವಲ ರು. 2ರ ದರದಲ್ಲಿ ಒದಗಿಸಿದ್ದರು. ನಂತರ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಹಾಗೂ ಎಂ.ಪಿ. ಪ್ರಕಾಶರಂತಹ ಬೆರಳೆಣಿಕೆಯ ಮಂತ್ರಿಗಳು ಕನ್ನಡಾಭಿರುಚಿಯ ಪ್ರಭಾವಳಿ ಹೊಂದಿದ್ದರೆಂಬುದನ್ನು ಸ್ಮರಿಸಿದರು.
ಭಾರತರತ್ನ ಪ್ರಶಸ್ತಿ ಪಡೆದ 3ನೇ ಕನ್ನಡಿಗ ಖ್ಯಾತಿಯ ವಿಜ್ಞಾನಿ ರಾವ್ ಅವರು ಕೂಡ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಕಲಿತವರೆಂಬುದನ್ನು ಶ್ರೀಗಳು ಸ್ಮರಿಸಿದರು. ಸರ್ಕಾರಿ ಪಪೂ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ವಸ್ತ್ರದ ಹಳೆಗನ್ನಡ ಕಾವ್ಯವಾಚನ ಗೈದರು.
ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡ್ರ ಹಾಗೂ ಬೆಟಗೇರಿಯ ಈದ್ಗಾ ಕಮಿಟಿ ಅಧ್ಯಕ್ಷ ಎಂ.ಆರ್. ಅಣ್ಣಿಗೇರಿ ಅವರನ್ನು ತೋಂಟದ ಶ್ರೀಗಳು ಸನ್ಮಾನಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ, ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಖಜಾಂಚಿ ಪ್ರಭಯ್ಯ ಹಿರೇಮಠ, ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ ಮುಂತಾದವರು ಉಪಸ್ಥಿತರಿದ್ದರು. ಶಿವಾನುಭವ ಸಮಿತಿ ಚೇರ್‌ಮನ್ ಎಸ್.ಎನ್.ಆದಿ ಸ್ವಾಗತಿಸಿದರು. ಜಿ.ಪಿ. ಕಟ್ಟಿಮನಿ ನಿರೂಪಿಸಿದರು.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement