ಸೌರಬೆಳಕು ಯೋಜನೆ ನೆನೆಗುದಿಗೆ
-ಶಿವಕುಮಾರ ಕುಷ್ಟಗಿ
ಗದಗ: ವಿದ್ಯುತ್ ಸಮಸ್ಯೆಯಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಈ ಹಿಂದಿನ ಸರ್ಕಾರ ಪ್ರಾಯೋಗಿಕವಾಗಿ ರಾಜ್ಯದ 6 ಜಿಲ್ಲೆಗಳಲ್ಲಿ ಜಾರಿಗೆ ತಂದಿದ್ದ ಸೌರಬೆಳಕು ಯೋಜನೆ ರಾಜ್ಯದಲ್ಲಿ ಸಂಪೂರ್ಣ ನೆಲಕಚ್ಚಿದ್ದು, ವಿಪರ್ಯಾಸವೆಂದರೆ ಪ್ರಾಯೋಗಿಕವಾಗಿ ಜಾರಿಯಾದ ಜಿಲ್ಲೆಯಲ್ಲಿಯೇ ಯೋಜನೆ ಸಮರ್ಪಕ ಅನುಷ್ಠಾನವಾಗಿಲ್ಲ.
ವಿದ್ಯುತ್ ಎನ್ನುವುದು ಪ್ರತಿಯೊಬ್ಬರಿಗೂ ಇಂದಿನ ಪ್ರಮುಖ ಅವಶ್ಯಕತೆಯಲ್ಲೊಂದಾಗಿದೆ. ಆದರೆ, ಮಳೆ ಕೊರತೆ ಮತ್ತು ದಿನೇ ದಿನೇ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ನೀಗಿಸಲು ಸರ್ಕಾರಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಪರ್ಯಾಯ ಇಂಧನದ ಮೂಲಗಳಲ್ಲಿಯೇ ನವೀಕರಿಸಬಹುದಾದಂತಹ ಇಂಧನದ ಮೂಲ ಸೌರ ವಿದ್ಯುತ್. ಅದಕ್ಕಾಗಿಯೇ 2009ರಲ್ಲಿ ಅಂದಿನ ಸರ್ಕಾರ ಚಿಂತನೆ ನಡೆಸಿ, ಈ ಯೋಜನೆ ಕುರಿತು ಆದೇಶ ಸಂಖ್ಯೆ ಗ್ರಾಅಪ 5 ಗ್ರಾಇಂಕಾ 2009 ಆದೇಶ ಹೊರಡಿಸಿತ್ತು. ಅದಕ್ಕೆ ಅಂತಿಮ ರೂಪ ಸಿಕ್ಕಿದ್ದು ಮಾತ್ರ 2012-13ನೇ ಸಾಲಿನಲ್ಲಿ ಎನ್ನುವುದು ಕೂಡಾ ಗಮನಿಸಬೇಕಾದ ಅಂಶವಾಗಿದೆ.
ಮುಗ್ಗರಿಸಿದ ಯೋಜನೆ: ಈ ಯೋಜನೆಯನ್ನು ಸರ್ಕಾರ ಬೆಂಗಳೂರ ವಿಭಾಗದ ತುಮಕೂರು, ಮೈಸೂರು ವಿಭಾಗದ ಚಿಕ್ಕಮಗಳೂರು, ಬೆಳಗಾವಿ ವಿಭಾಗದ ಗದಗ ಮತ್ತು ಧಾರವಾಡ, ಗುಲ್ಬರ್ಗಾ ವಿಭಾಗದ ಗುಲ್ಬರ್ಗ ಮತ್ತು ಬೀದರ್ ಜಿಲ್ಲೆಗಳಲ್ಲಿ ಸೌರಬೆಳಕು ಯೋಜನೆ ಜಾರಿ ಮಾಡಿ ಆದೇಶ ಹೊರಡಿಸಿ, ಆಯಾ ಜಿಪಂ ಸಿಇಒಗಳು ಅನುಷ್ಠಾನಕ್ಕೆ ತೆಗೆದುಕೊಳ್ಳಬೇಕಾದ ಗ್ರಾಮಗಳ ವಿವರ ಮತ್ತು ಅದಕ್ಕಾಗಿ ಜಿಪಂ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಲು ಸೂಚಿಸಿತ್ತು. ಜಿಪಂ ಸಾಮಾನ್ಯ ಸಭೆಯ ಅನುಮೋದನೆ ಪಡೆದು ಸರ್ಕಾರಕ್ಕೆ ಸಲ್ಲಿಸಿರುವ ಎಲ್ಲ ಜಿಪಂ ಸಿಇಒಗಳು ಈ ಯೋಜನೆ ನೈಜ ಪ್ರಗತಿಗೆ ಶ್ರಮಿಸದಿರುವುದು ಯೋಜನೆ ವೈಫಲ್ಯಕ್ಕೆ ಕಾರಣವಾಗಿದೆ.
ಹಳ್ಳಿಗರಿಗೆ ವರದಾನ: ಗ್ರಾಮೀಣ ಪ್ರದೇಶದಲ್ಲಿ ಇಂದು ರಾತ್ರಿಯೆಲ್ಲ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಇದರಿಂದ ಗ್ರಾಮೀಣ ಜನತೆ ಹತ್ತಾರು ಸಮಸ್ಯೆ ಎದುರಿಸುತ್ತಾರೆ. ಅದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇದೊಂದು ಉತ್ತಮ ಯೋಜನೆಯಾಗಿದೆ. ಗ್ರಾಮಗಳ ಪ್ರಮುಖ ಸ್ಥಳಗಳಲ್ಲಿ ಈ ಸೌರಬೆಳಕು ಯೋಜನೆಯ ಮೂಲಕ ಗ್ರಾಮದ ತುಂಬೆಲ್ಲ ಬೀದಿ ದೀಪಗಳನ್ನು ಅಳವಡಿಸಿದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಕೃಷಿಯನ್ನೇ ನಂಬಿರುವ ಗ್ರಾಮೀಣ ಜನತೆಗೆ ರಾತ್ರಿಪೂರ್ತಿ ಬೆಳಕು ನೀಡಬೇಕಾದ ಈ ಯೋಜನೆಯೇ ಕತ್ತಲಲ್ಲಿ ಉಳಿದಿದೆ.
ಸ್ಕೀಂ ಸೂಪರ್, ಪ್ರಗತಿ ಶೂನ್ಯ ಈ ಯೋಜನೆ ಸೂಪರ್. ಆದ್ರೆ, ಇದು ಸಮರ್ಪಕವಾಗಿ ಜಾರಿಯಾದಾಗ ಮಾತ್ರ ಯೋಜನೆ ಅನುಕೂಲತೆ ತಿಳಿಯುತ್ತದೆ. ಪ್ರಾಯೋಗಿಕವಾಗಿ ಅನುಷ್ಠಾನವಾದ ಜಿಲ್ಲೆಗಳ ಕೆಲ ಗ್ರಾಮಗಳಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಸೌರಬೆಳಕು ಯೋಜನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ, ರಾಜ್ಯದ ಎಲ್ಲ ಜಿಲ್ಲೆಗೂ ವಿಸ್ತರಿಸಿದಲ್ಲಿ ಹಳ್ಳಿಗಳಲ್ಲಿ ಇಂದು ಎದುರಿಸುತ್ತಿರುವ ಕತ್ತಲಿನ ಸಮಸ್ಯೆಯಿಂದ ಮುಕ್ತಿ ಸಿಗಲು ಸಾಧ್ಯ.
ಗ್ರಾಪಂಗೂ ಅನುಕೂಲ
ಸರ್ಕಾರ ಗ್ರಾಪಂಗಳಿಗೆ ನೀಡುತ್ತಿರುವ ಅನುದಾನದ ಶೇ. 50ಕ್ಕಿಂತ ಹೆಚ್ಚಿನ ಹಣ ವಿದ್ಯುತ್ ಬಿಲ್‌ಗೆ ಸಂದಾಯವಾಗುತ್ತಿದೆ. ಅದರಲ್ಲಿ ಗ್ರಾಮಗಳಲ್ಲಿನ ಬೀದಿ ದೀಪಗಳ ಪಾಲೇ ಹೆಚ್ಚಾಗಿದ್ದು, ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದಲ್ಲಿ, ವಿದ್ಯುತ್ ಕೊರತೆಯಿಂದ ರಾತ್ರಿ ವೇಳೆ ಬೆಳಕಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮೀಣ ಜನರಿಗೂ ಅನುಕೂಲವಾಗಲಿದೆ. ಗ್ರಾಪಂಗಳಿಗೆ ವಿದ್ಯುತ್ ಬಿಲ್ ಹೊರೆಯೂ ಕಡಿಮೆಯಾಗಲಿದೆ.