ಗೋವಿನಜೋಳ ತೆನೆ ರಾಶಿಗೆ ಆಕಸ್ಮಿಕ ಬೆಂಕಿ: ಅಪಾರ ಹಾನಿ
ಗಜೇಂದ್ರಗಡ: ಗೋವಿನಜೋಳ ತೆನೆ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಗೋವಿನಜೋಳ ನಷ್ಟವಾದ ಘಟನೆ ಸಮೀಪದ ಕಾಲಕಾಲೇಶ್ವರ ಬೆಟ್ಟದ ಮೇಲಿರುವ ಬೈರಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೃಷ್ಣಪ್ಪ ಜೊಳ್ಳಿಯವರು ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆದ ಗೋವಿನ ಜೋಳ ಕಟಾವು ಮಾಡಿ ಇನ್ನೇನು ರಾಶಿ ಮಾಡಬೇಕೆನ್ನುವ ಸಂದರ್ಭದಲ್ಲಿ ಗೋವಿನಜೋಳ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆ ಗೋವಿನಜೋಳದ ರಾಶಿ ಸಂಪೂರ್ಣ ಸುಟ್ಟಿದೆ. ಅಲ್ಲದೆ ಪಕ್ಕದಲ್ಲಿದ್ದ ತೊಗರಿ ಬೆಳೆಯ ಜಮೀನಿಗೂ ಬೆಂಕಿಯು ವ್ಯಾಪಿಸಿದ್ದರ ಪರಿಣಾಮ 4 ಎಕರೆ ತೊಗರಿ ಹೊಲದಲ್ಲಿ ಶೇ. 35ರಷ್ಟು ಬೆಳೆ ಬೆಂಕಿಗಾಹುತಿಯಾಗಿದೆ. ಸುದ್ದಿ ತಿಳಿದ ಅಗ್ನಿ ಶಾಮಕದಳ ಸ್ಥಳಕ್ಕಾಗಮಿಸಿ ಹೆಚ್ಚಿನ ಅನಾಹುತ ಸಂಭವಿಸುವುದನ್ನು ತಪ್ಪಿಸಿದರು. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.