ಜನರಲ್ಲಿನ ಮೂಢನಂಬಿಕೆ ತೊಲಗಬೇಕಿದೆ: ಅನ್ನದಾನೀಶ್ವರ ಶ್ರೀ
ಮುಂಡರಗಿ: ಜನರಲ್ಲಿನ ಮೂಢನಂಬಿಕೆಗಳನ್ನು ಸಾಮೂಹಿಕ ತಿಳಿವಳಿಕೆ ಹೇಳುವ ಮೂಲಕ ಕಳೆಯಬೇಕು ಎಂದು ಮುಂಡರಗಿ ಸಂಸ್ಥಾನ ಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಈಚೆಗೆ ಶ್ರೀಮಠದಲ್ಲಿ ಜರುಗಿದ 1688ನೇ ಮಾಸಿಕ ಶಿವಾನುಭವ ಮತ್ತು ಜ್ಞಾನನಿಧಿ ಚನ್ನಬಸವಣ್ಣನವರ ಸಂಸ್ಮರಣೆ ಕಾರ್ಯಕ್ರಮ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಕಷ್ಟ ನಷ್ಟಗಳಿಗೆ ಒಳಗಾದವರು ತಿಳಿದವರ ಬಳಿಗೆ ಹೋಗಿ ತಮ್ಮ ತೊಂದರೆಗಳನ್ನು ಹೇಳಿಕೊಂಡಾಗ ಅವರಲ್ಲಿ ಭಯ ಹುಟ್ಟಿಸಿ ಮೂಢನಂಬಿಕೆಗೆ ದಾರಿಮಾಡಿಕೊಡುತ್ತಿರುವುದು ಅನೇಕ ವರ್ಷಗಳಿಂದ ನಡೆದೇ ಇದೆ. ಇನ್ನು ಕೆಲವರು ನಿತ್ಯ ದೇವರ ಹೆಸರಿನಲ್ಲಿಯೇ ಶೋಷಣೆ ಮಾಡುತ್ತಿದ್ದಾರೆ. ಇದಕ್ಕಾಗಿ ಕಾನೂನು ರಚಿಸಿದರೂ ಇಂತಹ ಶೋಷಣೆಗಳು ಕಾನೂನಿನ ಮೂಲಕ ದೂರವಾಗುವುದಿಲ್ಲ. ಸ್ವತಃ ಕಾನೂನು ರಚಿಸಿದವರೂ ಈ ಕೃತ್ಯಗಳಿಂದ ಮುಕ್ತರಾಗದಿರುವುದು ವಿಪರ್ಯಾಸವಾಗಿದೆ. ಆತ್ಮವಿಮರ್ಶೆ, ಆಧ್ಯಾತ್ಮ ಚಿಂತನೆಗಳಿಂದ ಇವೆಲ್ಲಕ್ಕೂ ಪರಿಹಾರ ದೊರೆಯುವುದು. ಜನಪ್ರತಿನಿಧಿಗಳನ್ನು ಚುನಾವಣೆ ಸಂದರ್ಭದಲ್ಲಿ ವಿಜೇತರಾದಾಗ ಅವರ ಅಭಿಮಾನಿಗಳು ಹೆಗಲಮೇಲೆ ಹೊತ್ತು ಮೆರೆಸುವುದಿಲ್ಲವೇ, ಸಚಿನ್‌ರನ್ನು ಮೈದಾನದ ತುಂಬಾ ಸಹ ಆಟಗಾರರು ಹೊತ್ತು ಮೆರೆಸಲಿಲ್ಲವೇ? ಹಾಗೆ ಭಕ್ತರು ಭಕ್ತಿಯಿಂದ ಸ್ವಾಮೀಜಿಗಳನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ ಮೆರೆಸುವುದರಲ್ಲಿ ತಪ್ಪೇನಿದೆ ಎಂದರು. ಅಬ್ಬಿಗೇರಿಯ ಶಂಭುಲಿಂಗ ಶಾಸ್ತ್ರಿಗಳು ಜ್ಞಾನನಿಧಿ ಚೆನ್ನಬಸವಣ್ಣನವರ ಕುರಿತು ಮಾತನಾಡಿದರು. ಕಾಂತರಾಜ ಹಿರೇಮಠ, ಅಂದಪ್ಪ ಗೋಡಿ, ಆರ್.ಆರ್. ಹೆಗ್ಗಡಾಳ, ಬಾಬಣ್ಣ ಶಿವಶೆಟ್ಟರ ಮುಂತಾದವರಿದ್ದರು. ಪ್ರೊ. ಸಿ.ಎಸ್. ಅರಸನಾಳ ನಿರೂಪಿಸಿ, ವಂದಿಸಿದರು.