ವೀರಶೈವ ಸದಾಚಾರ ಮೌಢ್ಯವೆಂದು ಪರಿಗಣಿಸಲಾಗದು
ಕನ್ನಡಪ್ರಭ ವಾರ್ತೆ, ಗದಗ, ನ. 22
ವೀರಶೈವರ ಸದಾಚಾರಗಳನ್ನು ಮೌಢ್ಯಗಳೆಂದು ಪರಿಗಣಿಸಕೂಡದು ಎಂದು ಕಾಶೀ ಪೀಠದ ಡಾ. ಚಂದ್ರಶೇಖರ ಶಿವಾಚಾರ್ಯರು ಹೇಳಿದರು.
ಅವರು ಶುಕ್ರವಾರ ಬೆಟಗೇರಿಯ ಶರಣಬಸವೇಶ್ವರ ನಗರದಲ್ಲಿರುವ ಜ. ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಕಾಶೀ ಶ್ರೀಗಳ ಇಷ್ಟಲಿಂಗ ಪೂಜಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇತ್ತೀಚಿಗೆ ಮಾಧ್ಯಮಗಳಲ್ಲಿ ಮೌಢ್ಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ಮೌಢ್ಯ ಆಚರಣೆಗಳನ್ನು ನಿಲ್ಲಿಸಬೇಕಾಗಿದೆ. ಕೆಲವು ಬುದ್ಧಿಜೀವಿಗಳು ಮೂಢಾಚಾರ ಕರಡನ್ನು ತಯಾರಿಸಿ ಸರ್ಕಾರಕ್ಕೆ ಒಪ್ಪಿಸಿದ್ದಾರೆ. ಆ ಕರಡಿನಲ್ಲಿ ಏನೇನು ಇದೆ ಎಂಬುದು ಜನರಿಗೆ ಸಂಪೂರ್ಣವಾಗಿ ತಿಳಿದಿಲ್ಲ. ಯಾವ ಧರ್ಮಾಧಿಕಾರಿಗಳಿಗೂ ಅದು ತಲುಪಿಲ್ಲ. ಆದರೂ ಮಾಧ್ಯಮಗಳಲ್ಲಿ ರುದ್ರಾಕ್ಷಿಧಾರಣೆ, ಪಾದೋದಕ ಸ್ವೀಕಾರಗಳು ಅದರಲ್ಲಿ ಸೇರಿವೆ ಎಂಬುದು ತಿಳಿದು ಬಂದಿದೆ. ಭಸ್ಮ, ರುದ್ರಾಕ್ಷಿ ಧಾರಣೆಗಳು ಮತ್ತು ಪಾದೋದಕ ಪ್ರಸಾದಗಳ ಸೇವನೆಯು ವೀರಶೈವ ಧರ್ಮದ ಅಷ್ಟಾವರ್ಣಗಳಲ್ಲಿ ಪರಿಗಣಿಸಲಾಗಿವೆ. ಇವುಗಳನ್ನು ಮೂಢಾಚಾರಗಳೆಂದು ಕರೆಯುವುದು ನಿಜವಾದ ಬುದ್ಧಿಜೀವಿಗಳ ಕರ್ತವ್ಯವಲ್ಲ.
ಈಗಾಗಲೇ ಹಿಂದೂ ಧರ್ಮದ ಅನೇಕ ಧರ್ಮಾಚಾರ್ಯರು ವೀರಶೈವ ಧರ್ಮದ ಪೀಠಾಚಾರ್ಯರು ಮತ್ತು ಶಿವಾಚಾರ್ಯರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಇದೂ ಅಲ್ಲದೇ ರಾಜ್ಯಪಾಲರೂ ಈ ಕರಡನ್ನು ವಿಚಾರಣೆಗೆ ತಗೆದುಕೊಳ್ಳದಂತೆ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಈ ಮೂಢಾಚಾರಕ್ಕೆ ಸಂಬಂಧಿಸಿದ ಕರಡನ್ನು ಸರ್ಕಾರ ತಯಾರಿಸಿಲ್ಲ. ಬೆಳಗಾವಿ ಅಧಿವೇಶನದಲ್ಲಿ ಇದನ್ನು ವಿಚಾರಕ್ಕೆ ತೆಗೆದುಕೊಳ್ಳುವುದಿಲ್ಲವೆಂಬ ಸ್ಪಷ್ಟ ವಿಚಾರವನ್ನು ತಿಳಿಸಿದ್ದು ಸ್ವಾಗತಾರ್ಹವಾಗಿದೆ. ಕಾರಣ ಕರಡಿನಲ್ಲಿರುವ ಎಲ್ಲ ವಿಚಾರಗಳನ್ನು ಸಾರ್ವಜನಿಕರ ಗಮನಕ್ಕೆ ತಂದು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದರು. ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ಕಾಶೀ ಶ್ರೀಗಳ ಕಾರ್ಯಗಳು ಜನಮಾನಸದಲ್ಲಿವೆ. ಜನಪರ ಕೆಲಸಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಸದಾಶಯದೊಂದಿಗೆ ಕಾಶೀ ಶ್ರೀಗಳು ಧಾರ್ಮಿಕತೆಯ ಕುರಿತು ಪ್ರವಚನ ನೀಡುವ ಮೂಲಕ ಧಾರ್ಮಿಕ ಸಂಚಲನವನ್ನು ಮೂಡಿಸುತ್ತಿರುವುದು ಅಭಿನಂದನಾರ್ಹವಾಗಿದೆ ಎಂದರು. ಅಡ್ನೂರಿನ ಪಂಚಾಕ್ಷರ ಶಿವಾಚಾರ್ಯರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಸೊರಟೂರಿನ ಫಕೀರೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಅತಿಥಿಗಳಾಗಿ ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಲ್.ಸಿ. ಲಿಂಬಯ್ಯಸ್ವಾಮಿಮಠ, ಮಂಜುನಾಥ ಅಬ್ಬಿಗೇರಿ, ಬೆಟದಯ್ಯ ಹಿರೇಮಠ, ಯು.ಆರ್. ಮಾಳೆಕೊಪ್ಪಮಠ, ಅಂದಾನಪ್ಪ, ಬಸವರಾಜ ಶಾಬಾದಿಮಠ ಮುಂತಾದವರು ಉಪಸ್ಥಿತರಿದ್ದರು. ಸಿದ್ಧಲಿಂಗಪ್ಪ ಚಳಗೇರಿ ಸ್ವಾಗತಿಸಿದರು. ವೀರೇಶ ಕೂಗು ನಿರೂಪಿಸಿದರು.