ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಾವಯವ ಕೃಷಿಯಲ್ಲಿ ಸುಗ್ನಳ್ಳಿ ರೈತ ಸಾಧನೆ

Mainashree
Updated On : 23 Nov 2013, 11:05 am

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ನ. 22
ಆಧುನಿಕ ಕೃಷಿ ತಂತ್ರಜ್ಞಾನ ಹಾಗೂ ಹೆಚ್ಚಿದ ರಾಸಾಯನಿಕ ಗೊಬ್ಬರದ ಬೆಲೆಯಿಂದ ಇಂದು ಕೃಷಿ ಲಾಭದಾಯಕವಲ್ಲ ಎಂದು ಗೋಳಾಡುವ ರೈತರೇ ಹೆಚ್ಚು. ಆದರೆ, ನಮ್ಮ ಸಾಂಪ್ರದಾಯಿಕ ಸಾವಯವ ಕೃಷಿ ವಿಧಾನ ಅಳವಡಿಸಿಕೊಂಡು, ಉತ್ತಮ ಬೆಳೆ ಬೆಳೆದು ಆರ್ಥಿಕ ಸಬಲರಾಗಬಹುದು ಎನ್ನುವುದನ್ನು ತಾಲೂಕಿನ ಸುಗ್ನಳ್ಳಿ ಗ್ರಾಮದ ಕೃಷಿಕ ಬಸವರಾಜ ಚಂಡ್ರಪ್ಪ ನಾವಿ ತೋರಿಸಿಕೊಟ್ಟಿದ್ದಾರೆ.
ಸಾವಯವ ಕೃಷಿಯಲ್ಲಿನ ಸಾಧನೆಗಾಗಿ ಇವರಿಗೆ ಹಲವು ಪ್ರಶಸ್ತಿ ಒಲಿದು ಬಂದಿವೆ. ಅಲ್ಲದೇ ನ. 24 ರಂದು ಬಾಗಲಕೋಟೆ ವಿಶ್ವವಿದ್ಯಾಲಯ ನೀಡುವ ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿಗೆ ಗದಗ ಜಿಲ್ಲೆಯಿಂದ ಆಯ್ಕೆಯಾಗಿದ್ದು ಹೆಮ್ಮೆಯ ಸಂಗತಿ.
ಯಾವುದೇ ಅತ್ಯಾಧುನಿಕ ತಂತ್ರಜ್ಞಾನ ಅನುಸರಿಸದೇ ಇರುವ ತನ್ನ ಅಲ್ಪ ಜಮೀನಿನಲ್ಲೇ 8 ವರ್ಷದಿಂದ ಸಾವಯವ ಕೃಷಿ ಜತೆಗೆ ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತನ್ನ ಮನೆಯ ಸುತ್ತಲಿರುವ ಜಮೀನಿನಲ್ಲೇ ಎರೆಹುಳು ಗೊಬ್ಬರ ತಯಾರಿಕೆಯ ಘಟಕಗಳನ್ನು ಮಾಡಿದ್ದು, ಸಸ್ಯಜನ್ಯ ಕೀಟನಾಶಕ, ಸಾವಯವ ಯೂರಿಯಾ, ಪಂಚಗವ್ಯ, ಜೀವ ಚೈತನ್ಯ ಕಾಂಪೋಸ್ಟ್, ಎರೆಹುಳು ಗೊಬ್ಬರ, ಯರೆಜಲ, ಜೀವಸಾರ ಘಟಕ ಗೊಬ್ಬರ ತಯಾರಿಕೆ ಮಾಡುತ್ತಿದ್ದು, ಇದಕ್ಕೆ ಬೇಕಾಗುವ ಕೃಷಿ ತ್ಯಾಜ್ಯ ವಸ್ತುಗಳಾದ ಬೇವು, ಹೊಂಗೆ, ಮದಗುಣಕಿ, ಬಿಲ್‌ಪತ್ರಿ, ಸೀತಾಫಲ, ಪಪ್ಪಾಯಿ ಇವುಗಳಿಂದ ಉದುರಿದ ಹಣ್ಣೆಲೆಗಳಿಂದ ಗೊಬ್ಬರ ತಯಾರಿಕೆ ಮಾಡುತ್ತಾರೆ.
ಲಕ್ಷಾಂತರ ಆದಾಯ: ತನ್ನ ಜಮೀನಿನಲ್ಲಿ ರೇಷ್ಮೆ, ಚಿಕ್ಕು, ಮಾವು, ತೆಂಗು, ಸೀತಾಫಲ, ಪಪ್ಪಾಯಿ, ಪೇರಲ, ಲಿಂಬೆ, ತಾಳೆಗಿಡ, ಸಾಗವಾನಿ, ಸೂರ್ಯಕಾಂತಿ, ಮೆಕ್ಕೆಜೋಳ, ಹೆಸರು, ತರಕಾರಿ ಬೆಳೆ ಬೆಳೆಯುತ್ತಿದ್ದು, ರೇಷ್ಮೆಯಿಂದಲೇ ಪ್ರತಿ ತಿಂಗಳು ರು. 40 ಸಾವಿರಕ್ಕೂ ಹೆಚ್ಚು ಆದಾಯ ಬರುತ್ತಿದೆ. ಕಡಿಮೆ ಬಂಡವಾಳ ವ್ಯಯಮಾಡಿ ಪ್ರತಿ ವರ್ಷವೂ ಎರೆಹುಳು ಗೊಬ್ಬರ ಮಾರಾಟ ಹಾಗೂ ವಿವಿಧ ಬೆಳೆಗಳ ಫಸಲು ಮಾರಾಟದಿಂದ ಲಕ್ಷಾಂತರ ಹಣ ಕೃಷಿಕ ಬಸವರಾಜ ಪಡೆಯುತ್ತಿದ್ದಾನೆ. ಕೃಷಿ ಜತೆಗೆ ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ, ಹೈನುಗಾರಿಕೆ ಪ್ರಾರಂಭಿಸಲು ಮುಂದಾಗಿದ್ದಾರೆ.
ಸಾವಯವ ಕೃಷಿ ಅವಶ್ಯ: ರಾಸಾಯನಿಕ ಗೊಬ್ಬರವನ್ನು ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸುತ್ತಿದ್ದು, ಕೋಟ್ಯಂತರ ಸಬ್ಸಿಡಿ ಹಣ ನೀಡುತ್ತಿದೆ. ಇದರಿಂದ ಉತ್ಪಾದಿಸಿದ ಆಹಾರ ಪದಾರ್ಥಗಳ ಬಳಕೆಯಿಂದ ಇಡಿ ಜೀವ ಸಂಕುಲ ನಾಶವಾಗುವ ಸಾಧ್ಯತೆ ಹೆಚ್ಚಾಗಿದೆ. ಬಸವರಾಜ ನಾವಿ ಅನುಸರಿಸುತ್ತಿರುವ ಸಮಗ್ರ ಕೃಷಿ ಪದ್ಧತಿ ಪ್ರಸ್ತುತ ಅವಶ್ಯವಿದೆ. ನಾವು ನಮ್ಮ ಪಾರಂಪರಿಕ ಸಾವಯವ ಹಾಗೂ ಸಮಗ್ರ ಕೃಷಿ ಅಳವಡಿಕೆ ಅನಿವಾರ್ಯವಾಗಿದ್ದು, ಇದರಿಂದ ನಮ್ಮ ಕೃಷಿಕರು ಸಾಲವಿಲ್ಲದ ಸ್ವಾವಲಂಬಿ ಬದುಕು ನಡೆಸಲು ಸಾಧ್ಯ. ಇಲ್ಲದಿದ್ದರೆ ರೈತ ಸಾಲದ ಶೂಲದಲ್ಲಿ ಸಿಲುಕಿ ಹೊರಬರಲಾರದೇ ನರಳುವುದಂತು ಸತ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement