ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

15 ದಿನಗಳಲ್ಲಿ ಎಟಿಎಂಗಳಿಗೆ ಭದ್ರತೆ ಕಲ್ಪಿಸಿ, ಇಲ್ಲದಿದ್ದರೆ ಸ್ಥಗಿತಗೊಳಿಸಿ

Vishwanath S
Updated On : 24 Nov 2013, 2:51 am

ಕನ್ನಡಪ್ರಭ ವಾರ್ತೆ, ಗದಗ, ನ. 23
ಜಿಲ್ಲೆಯಲ್ಲಿರುವ ಎಲ್ಲ ಬ್ಯಾಂಕ್ ಅಧಿಕಾರಿಗಳು 15 ದಿನಗಳೊಳಗಾಗಿ ನಿಮ್ಮ ಬ್ಯಾಂಕ್‌ಗಳ ಎಟಿಎಂಗಳಲ್ಲಿರುವ ಎಲ್ಲ ಸಮಸ್ಯೆ ಬಗೆಹರಿಸಿ, ಸೂಕ್ತ ಭದ್ರತೆ ಕಲ್ಪಿಸಿ, ಇಲ್ಲವೇ ಅವುಗಳನ್ನು ಸ್ಥಗಿತಗೊಳಿಸಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್.ಡಿ. ಶರಣಪ್ಪ ಖಡಕ್ ಎಚ್ಚರಿಕೆ ನೀಡಿದರು.
ಅವರು ಶನಿವಾರ ಸಂಜೆ ಜಿಲ್ಲಾ ಪೊಲೀಸ್ ಇಲಾಖೆಯ ಸಭಾಭವನದಲ್ಲಿ ಜಿಲ್ಲೆಯ ಎಲ್ಲ ಬ್ಯಾಂಕ್ ಅಧಿಕಾರಿಗಳಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ 51 ಎಟಿಎಂಗಳಿದ್ದು ಅವುಗಳಲ್ಲಿ ಶೇ. 50 ಎಟಿಎಂಗಳು ಯಾವುದೇ ಸುರಕ್ಷಾ ಕ್ರಮಗಳನ್ನು ತೆಗೆದುಕೊಂಡಿಲ್ಲ.
ಬಹುತೇಕ ಎಟಿಎಂಗಳಲ್ಲಿ ಸರಿಯಾದ ಸೆಕ್ಯೂರಿಟಿ ವ್ಯವಸ್ಥೆಯನ್ನು ಕಲ್ಪಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಬ್ಯಾಂಕ್‌ಗಳಲ್ಲಿರುವ ಎಟಿಎಂಗಳಲ್ಲಿನ ಇನ್‌ಬಿಲ್ಟ್ ಕ್ಯಾಮೆರಾ ಕ್ಯಾಪ್ಯಾಸಿಟಿ ಹೆಚ್ಚಿಸಬೇಕು. ಈಗಿರುವ ಎಲ್ಲ ಕ್ಯಾಮೆರಾಗಳಲ್ಲಿನ ಚಿತ್ರಗಳು ಸಮರ್ಪಕವಾಗಿ ಬರುತ್ತಿಲ್ಲ. ಇನ್ನು ಎಟಿಎಂಗಳಿಗೆ ಬರುವ ವ್ಯಕ್ತಿಗಳ ಚಿತ್ರಗಳು ಸಿಸಿ ಕ್ಯಾಮೆರಾದಲ್ಲಿ ಸ್ವಚ್ಛವಾಗಿ ಸೆರೆಯಾಗಬೇಕು ಎಂದರೆ, ಸರಿಯಾದ ಬೆಳಕಿನ ವ್ಯವಸ್ಥೆ ಮತ್ತು ಎಟಿಎಂ ಅಳವಡಿಸುವ ವಿಧಾನದಲ್ಲಿ ಹಲವಾರು ಮಾರ್ಪಾಡುಗಳನ್ನು ಮಾಡಬೇಕಿದೆ.
ಮುಖ್ಯವಾಗಿ ಎಟಿಎಂಗಳ ಒಳಗೆ ವ್ಯಕ್ತಿಗಳು ತೊಂದರೆಯಲ್ಲಿ ಸಿಲುಕಿಕೊಂಡಾಗ ಹೊರಗಿನವರಿಗೆ ತಿಳಿಸುವ ನಿಟ್ಟಿನಲ್ಲಿ ವಿಶೇಷ ಅಲಾರಾಂಗಳನ್ನು ಅಳವಡಿಸಬೇಕು. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಹಾಗೂ ಎಟಿಎಂಗಳ ಗ್ಲಾಸ್‌ಗಳಿಗೆ ನಿಮ್ಮ ಬ್ಯಾಂಕ್‌ಗಳ ಜಾಹೀರಾತುಗಳನ್ನು ಹಾಕುವುದರಿಂದ ಒಳಗಡೆ ಏನು ನಡೆಯುತ್ತಿದೆ ಎನ್ನುವ ಕುರಿತು ಸರಿಯಾದ ಮಾಹಿತಿ ಹೊರಗಿನವರಿಗೆ (ಸೆಕ್ಯೂರಿಟಿಗೆ) ಗೊತ್ತಾಗುವುದಿಲ್ಲ.
ಎಟಿಎಂಗಳಲ್ಲಿ ಸಾಕಷ್ಟು ಭಿತ್ತಿ ಪತ್ರಗಳನ್ನು ಅಳವಡಿಸಿ ಆಯಾ ಪೊಲೀಸ್ ಠಾಣೆಗಳ ಮತ್ತು ಪೊಲೀಸ್ ಕಂಟ್ರೋಲ್ ರೂಂನ ನಂಬರ್‌ಗಳನ್ನು ಪ್ರಕಟಿಸಬೇಕು. ಸಿ.ಸಿ. ಕ್ಯಾಮೆರಾಗಳನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಿ ಸುಸ್ಥಿತಿಯಲ್ಲಿಡಬೇಕು ಎಂದು ಸೂಚಿದರು.
ತಕ್ಷಣವೇ ಹೊರಗೆ ಸಿ.ಸಿ. ಕ್ಯಾಮೆರಾ ಅಳವಡಿಸಿ: ಬ್ಯಾಂಕ್‌ನ ಎಟಿಎಂಗಳ ಹೊರಗೆ ಸಿ.ಸಿ ಕ್ಯಾಮೆರಾ ಅಳವಡಿಸುವಲ್ಲಿ ಬ್ಯಾಂಕ್‌ಗಳು ವಿಫಲವಾಗಿದ್ದು, ಯಾವುದೇ ಅಪರಾಧಿ, ಅಪರಾಧ ಮಾಡುವ ಮೊದಲು ಹೊರಗಡೆ ನಿಂತು ಹೊಂಚು ಹಾಕುತ್ತಾನೆ. ಅಪರಾಧ ನಡೆಸಿದ ನಂತರವೂ ಅಲ್ಲಿಂದ ಪರಾರಿಯಾಗಲು ವಾಹನಗಳನ್ನು ಬಳಸುವುದರಿಂದ ಅಪರಾಧಿಗಳ ಪತ್ತೆ ಮಾಡಲು ಬ್ಯಾಂಕ್ ಹೊರಗಡೆಯ ಸಿ.ಸಿ. ಕ್ಯಾಮೆರಾದ ದೃಶ್ಯಾವಳಿಗಳೇ ಹೆಚ್ಚು ಅನುಕೂಲಕಾರಿಯಾಗಿದ್ದು, ತಕ್ಷಣವೇ ಬ್ಯಾಂಕ್ ಅಧಿಕಾರಿಗಳು ತಮ್ಮ ತಮ್ಮ ಬ್ಯಾಂಕ್ ಮತ್ತು ಎಟಿಎಂಗಳ ಹೊರಗೆ ಸಿ.ಸಿ. ಕ್ಯಾಮೆರಾ ಅಳವಡಿಸಬೇಕು.
ಸುರಕ್ಷತೆಗೆ ಆದ್ಯತೆ ನೀಡಿ: ಬ್ಯಾಂಕ್ ಹಾಗೂ ಎಟಿಎಂಗಳಿಗೆ ಬರುವ ಗ್ರಾಹಕರಿಗೆ ಕೇವಲ ವ್ಯವಹಾರಿಕ ಸೇವೆ ನೀಡುವುದು ಮಾತ್ರವಲ್ಲ, ಅವರ ಜೀವದ ರಕ್ಷಣೆ ಸೇರಿದಂತೆ ಅವರ ಹಣ ರಕ್ಷಣೆಯಲ್ಲಿಯೂ ಬ್ಯಾಂಕಿನ ಪಾತ್ರ ಪ್ರಮುಖವಾಗಿರುತ್ತದೆ. ಈ ಕುರಿತು ಈಗಾಗಲೇ ಸುಪ್ರೀಂ ಕೋರ್ಟ್ ಸೂಕ್ತ ನಿರ್ದೇಶನ ನೀಡಿದೆ. ಬ್ಯಾಂಕ್ ಅಧಿಕಾರಿಗಳು ಪೊಲೀಸರೊಂದಿಗೆ ಕೈ ಜೋಡಿಸಿದಲ್ಲಿ ಮಾತ್ರ ಅಪರಾಧಿ ಕೃತ್ಯಗಳನ್ನು ತಡೆಯಲು ಸಾಧ್ಯ, ಆ ನಿಟ್ಟಿನಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳು ತಕ್ಷಣವೇ ಸೆಕ್ಟೂರಿಟಿ ಗಾರ್ಡ್‌ಗಳನ್ನು ನೇಮಿಸಿ ಮತ್ತು ಎಟಿಎಂನ ಒಳಗೆ ಪ್ರವೇಶಿಸಲು ಈ ಹಿಂದಿನಂತೆ ಕಾರ್ಡ್ ಹಾಕಿಯೇ ಪ್ರವೇಶ ಪಡೆಯುವಂತಹ ವ್ಯವಸ್ಥೆಯನ್ನು ಮರು ನಿರ್ಮಾಣ ಮಾಡಿರಿ ಎಂದರು. ಡಿಎಸ್ಪಿ ವಿಜಯ ಡಂಬಳ ಸ್ವಾಗತಿಸಿದರು. ಪ್ರೊಬೆಷನರಿ ಡಿಎಸ್ಪಿ ಬಿ.ಎಸ್. ನೇಮನಗೌಡ್ರ. ಜಿಲ್ಲೆಯ ಎಲ್ಲ ಸಿಪಿಐಗಳು ಹಾಜರಿದ್ದರು.
 ಇದು ನಮ್ಮ ಜವಾಬ್ದಾರಿ ಅಲ್ಲ...
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಭೆಯಲ್ಲಿ ಪಾಲ್ಗೊಂಡಿದ್ದ ಬ್ಯಾಂಕ್ ಅಧಿಕಾರಿಗಳಿಗೆ ಕೆಲ ಖಡಕ್ ಸೂಚನೆ ಕೊಡುತ್ತಿದ್ದಂತೆ ಇದು ನಮ್ಮ ಜವಾಬ್ದಾರಿ ಅಲ್ಲ, ಇದೆಲ್ಲವನ್ನು ಮೇಲಧಿಕಾರಿಗಳೇ ನಿರ್ಧರಿಸುತ್ತಾರೆ. ಎಲ್ಲವೂ ಸೆಂಟ್ರಲ್ ಮಟ್ಟದಲ್ಲಿ ನಿರ್ಧಾರವಾಗುತ್ತದೆ ಎನ್ನುವ ಹಾರಿಕೆ ಉತ್ತರವನ್ನು ಬ್ಯಾಂಕ್ ಅಧಿಕಾರಿಗಳು ನೀಡಲು ಪ್ರಾರಂಭಿಸುತ್ತಿದ್ದಂತೆ, ಗರಂ ಆದ ಎಸ್ಪಿ ಹಾಗಾದರೆ ರಾಜ್ಯ ಸರ್ಕಾರದ ಯಾವುದೇ ಆದೇಶಗಳನ್ನು ನೀವು ಪಾಲಿಸುವುದಿಲ್ಲವೇ ಎನ್ನುತ್ತಿದ್ದಂತೆ ತಣ್ಣಗಾದ ಅಧಿಕಾರಿಗಳು, ಈ ಕುರಿತು ನಮ್ಮ ಹಿರಿಯ ಅಧಿಕಾರಿಗಳ ಸಭೆಯನ್ನು ಕರೆಯಿರಿ ಎಂದು ಸಲಹೆ ನೀಡಲು ಪ್ರಾರಂಭಿಸಿದರು. ಬ್ಯಾಂಕ್‌ಗೆ ಹೋದಾಗಲೂ ಸಾರ್ವಜನಿಕರೊಂದಿಗೆ ಸರಿಯಾಗಿ ವರ್ತಿಸದ ಬ್ಯಾಂಕ್ ಅಧಿಕಾರಿಗಳು ಶನಿವಾರದ ಸಭೆಯಲ್ಲಿಯೂ ಇದ್ಯಾವುದು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸಿದ್ದು ವಿಶೇಷವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement