ಶಿಕ್ಷಣದಿಂದ ಮನುಷ್ಯನಿಗೆ ಗೌರವ
ಕನ್ನಡಪ್ರಭ ವಾರ್ತೆ, ಗದಗ, ನ. 23
ಶಿಕ್ಷಣದಿಂದ ಮನುಷ್ಯನ ವ್ಯಕ್ತಿತ್ವ ಹಾಗೂ ಘನತೆ ಹೆಚ್ಚುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ನಗರದ ವಿದ್ಯಾವರ್ಧಕ ಸಂಸ್ಥೆಯ ವತಿಯಿಂದ ಸಿ.ಎಸ್. ಪಾಟೀಲ ಪ್ರೌಢಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಸಂಸ್ಥೆಯ ಸಂಸ್ಥಾಪಕ ಗೌರವ ಕಾರ್ಯದರ್ಶಿ ದಿ. ಸಿ.ಎಸ್. ಪಾಟೀಲರ 101ನೇ ಜನ್ಮದಿನಾಚರಣೆ ಹಾಗೂ ಪುತ್ಥಳಿ ಅನಾವರಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ದಿ. ಸಿ.ಎಸ್. ಪಾಟೀಲರು ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದ್ದು, ಶ್ರದ್ಧಾಪೂರ್ವಕ ಸೇವೆ ಪ್ರಶಂಸನೀಯವಾಗಿದೆ. ವ್ಯಕ್ತಿತ್ವ ಹಾಗೂ ಘನತೆಗೆ ತಕ್ಕಂತೆ ಸೂಕ್ತ ಸಂದರ್ಭದಲ್ಲಿ ವಿವಿಧ ಕಾರ್ಯಗಳನ್ನು ಜರುಗಿಸಿ, ಅವಳಿ ನಗರದ ಶೈಕ್ಷಣಿಕ ರಂಗಕ್ಕೆ ಹೊಸ ಆಯಾಮ ನೀಡುವಲ್ಲಿ ವಿದ್ಯಾವರ್ಧಕ ಸಂಸ್ಥೆಯ ಪಾತ್ರ ಪ್ರಮುಖವಾಗಿದ್ದು, ನಗರದ ಹಲವಾರು ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಶಿಕ್ಷಕರನ್ನು ಕೊಡುಗೆಯಾಗಿ ನೀಡುವಲ್ಲಿ ಸಂಸ್ಥೆಯು ಶ್ರಮಿಸಿದೆ.
ಗದಗ ಜಿಲ್ಲೆಯಾದ್ಯಂತ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯನ್ನು ಪ್ರಾರಂಭಿಕ ಹಂತದಿಂದಲೇ ಉತ್ತಮವಾಗಿ ನಡೆಸಿ ವಿದ್ಯಾರ್ಥಿ ದಿಸೆಯಿಂದಲೇ ಮಕ್ಕಳಲ್ಲಿ ನಾಯಕತ್ವ ಮತ್ತು ಉದಾರತ್ವ ಗುಣಗಳನ್ನು ಹುಟ್ಟುಹಾಕುವಲ್ಲಿ ಸಿ.ಎಸ್. ಪಾಟೀಲರು ಪ್ರಯತ್ನಿಸಿದ್ದು, ಅವರ ಸೇವೆಯನ್ನು ಪರಿಗಣಿಸಿ 101ನೇ ಜನ್ಮದಿನಾಚರಣೆಯ ಈ ಸಂದರ್ಭದಲ್ಲಿ ಶಾಲಾ ಆವರಣದಲ್ಲಿ ಅವರ ಪ್ರತಿಮೆ ಪ್ರತಿಷ್ಠಾಪಿಸುವ ಮೂಲಕ ಹೊಸ ಪೀಳಿಗೆಗೆ ಅವರ ಆದರ್ಶ ಪಸರಿಸುವ ಕಾರ್ಯ ಸ್ವಾಗತಾರ್ಹ ಕಾರ್ಯಕ್ರಮವಾಗಿದೆ ಎಂದರು. ಸಂಸ್ಥೆಯ ಶಿಕ್ಷಕ ಎನ್.ವಿ. ಪಾಟೀಲ ಸಂಪಾದಿಸಿದ ಸಿ.ಎಸ್.ಪಾಟೀಲರ ಬದುಕು ಮತ್ತು ಸಾಧನೆ ಕುರಿತ ಸಿಲ್ವರ್ ಸ್ಟಾರ್ ಸಿ.ಎಸ್. ಪಾಟೀಲ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಸೇವಾ ನಿಷ್ಠೆ ಹಾಗೂ ಶೈಕ್ಷಣಿಕ ಜನಪರ ಕಾಳಜಿಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ಗದಗ ಪರಿಸರದ ಶೈಕ್ಷಣಿಕ ಕ್ಷೇತ್ರಕ್ಕೆ ಸಿ.ಎಸ್.ಪಾಟೀಲರ ಕೊಡುಗೆ ಮಹತ್ವದ್ದಾಗಿದ್ದು, ನಿರಂತರ ಸ್ಮರಣೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮೂರ್ತಿ ಶಿಲ್ಪಿ ವೀರೇಶ ಮಾಯಾಚಾರ್ಯ ಹಾಗೂ ಪುತ್ಥಳಿದಾನಿ ಗಿರಿಯಪ್ಪಗೌಡ ಪಾಟೀಲಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾನ್ನಿಧ್ಯವನ್ನು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜ. ಬಸವಜಯಮೃತ್ಯುಂಜಯ ಶ್ರೀಗಳು ಹಾಗೂ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ವಹಿಸಿದ್ದರು.
ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ವಿ.ಎಲ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಡಿ.ಆರ್. ಪಾಟೀಲ, ಅಂದಾನಪ್ಪ ಪಟ್ಟಣಶೆಟ್ಟಿ, ಈಶಪ್ಪಜ್ಜ ಕರಿಬಿಷ್ಠಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಬಿ.ಜಿ. ಅಣ್ಣಿಗೇರಿ, ನಿವೃತ್ತ ಶಿಕ್ಷಕ ಕೆ.ವಿ. ಬಾಳಿಕಾಯಿ, ವೀರನಗೌಡ ಪಾಟೀಲ, ಎಸ್.ಎಂ. ಪಾಟೀಲ, ಶ್ರೀನಿವಾಸ ಹುಯಿಲಗೋಳ, ಮಹೇಂದ್ರ ಸಿಂಘಿ ಮುಂತಾದವರು ಪಾಲ್ಗೊಂಡಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾ. ಕೆ.ಬಿ. ಭಜಂತ್ರಿ ಸ್ವಾಗತಿಸಿದರು. ಎಸ್.ಬಿ. ಕಿತ್ತೂರ ನಿರೂಪಿಸಿದರು.