ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶಿವರಾಮ ಕಾರಂತ ಸಮೃದ್ಧ ಸಾಹಿತ್ಯದ ಹರಿಕಾರ

Vishwanath S
Updated On : 24 Nov 2013, 2:51 am

ಕನ್ನಡಪ್ರಭ ವಾರ್ತೆ, ಗದಗ, ನ. 23
ಶಿವರಾಮ ಕಾರಂತರು ಹರಟೆ ವಿಡಂಬನೆ ವಿಮರ್ಶಾತ್ಮಕ ಗ್ರಂಥಗಳ ಮೂಲಕ ದೇವರ ಹೆಸರಿನಲ್ಲಿ ನಡೆದ ಡಂಬಾಚಾರ, ಅಂಧ ವಿಶ್ವಾಸಗಳನ್ನು ಸಮಾಜದಿಂದ ಬೇರು ಸಹಿತ ಕಿತ್ತೊಗೆಯಲು ಶ್ರಮಿಸಿದವರು. ಕಾರಂತರು ಸಮೃದ್ಧ ಸಾಹಿತ್ಯದ ಹರಿಕಾರರಾಗಿದ್ದಾರೆ ಎಂದು ಡಾ. ರಾಮಚಂದ್ರ ಹಂಸನೂರ ಹೇಳಿದರು.
ಈಚೆಗೆ ಬೆಟಗೇರಿಯ ಮಹಾರಾಣಾ ಪ್ರತಾಪಸಿಂಹ ಪಪೂ ಮಹಾವಿದ್ಯಾಲಯದಲ್ಲಿ ಗದಗ ತಾಲೂಕು ಕಸಾಪ ನುಡಿಹಬ್ಬದ ಅಂಗವಾಗಿ ಏರ್ಪಡಿಸಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.
ಸಣ್ಣ ಕಥೆ, ನಾಟಕ, ಕಾದಂಬರಿ, ಮಕ್ಕಳ ಸಾಹಿತ್ಯ ಮುಂತಾದ ಸಾಹಿತ್ಯ ಪ್ರಕಾರಗಳ ಮೂಲಕ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದವರು ಶಿವರಾಮ ಕಾರಂತರು. ವಸಂತ ಪತ್ರಿಕೆಯ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿ, ಚಿತ್ರಕೂಟ ಕಾದಂಬರಿಯ ಮೂಲಕ ಕನ್ನಡಿಗರಲ್ಲಿ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿದ ಮಹಾನ್ ಸಾಹಿತಿ. ತಮ್ಮ ನಾಟಕಗಳ ಮೂಲಕ ಸಮಾಜದಲ್ಲಿ ಬೇರು ಬಿಟ್ಟ ಮೂಢನಂಬಿಕೆ, ಕಂದಾಚಾರ ಅಂಧವಿಶ್ವಾಸಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಅಲ್ಲದೇ ಅಸ್ಪೃಶ್ಯತೆ, ಜನರಲ್ಲಿರುವ ದುಶ್ಚಟಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳ ಮೂಲಕವಾಗಿ ಸಮಾಜದ ಅಂಕುಡೊಂಕು ತಿದ್ದಲು ಪ್ರಯತ್ನಿಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಗಣೇಶಸಿಂಗ್ ಬ್ಯಾಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸ ಮಾಲಿಕೆಯ ಸಂಯೋಜಕ ದತ್ತಪ್ರಸನ್ನ ಪಾಟೀಲ, ಎ.ಎ. ಹದ್ಲಿ, ಹಿರೇಮಠ, ಎಸ್.ಎಂ ಉಳ್ಳಾಗಡ್ಡಿ, ವಾಲ್ಮಿಕಿ ಹಾಗೂ ವಿದ್ಯಾರ್ಥಿಗಳು ಮತ್ತು ಕಸಾಪ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗದಗ ತಾಲೂಕು ಕಸಾಪ ಅಧ್ಯಕ್ಷ ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಡಿ.ಎಸ್. ನಾಯಕ ನಿರೂಪಿಸಿದರು. ಗೌರವ ಕಾರ್ಯದರ್ಶಿ ಶಶಿಕಾಂತ ಕೊರ್ಲಹಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement