ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಈರುಳ್ಳಿಗೆ ಹೆಚ್ಚಿದ ಕಳ್ಳರು: ಕಂಗಾಲಾದ ರೈತರು

Mainashree
Updated On : 25 Nov 2013, 11:05 am

ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ನ. 24
ಹತ್ತಾರು ಸಮಸ್ಯೆಗಳ ಮಧ್ಯೆ ಈರುಳ್ಳಿ ಬೆಳೆದಿರುವ ಜಿಲ್ಲೆಯ ರೈತರಿಗೆ ಸದ್ಯ ಉತ್ತಮ ಬೆಲೆ ಸಿಗುತ್ತಿದೆ. ಮಾಡಿದ್ದ ಸಾಲವನ್ನು ತೀರಿಸುವ ಹುಮ್ಮಸ್ಸಿನಲ್ಲಿ ರೈತರಿದ್ದಾರೆ. ಆದರೆ, ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿನ ಕೆಲ ಕಳ್ಳರು ಹೊಲದಲ್ಲಿನ ಬೆಳೆಯನ್ನೇ (ಈರುಳ್ಳಿ) ಕಳ್ಳತನ ಮಾಡುತ್ತಿದ್ದಾರೆ.
ಇದರಿಂದ ರೈತ ಸಮುದಾಯ ಕಂಗಾಲಾಗಿದೆ. ಅದ್ಯಾವ ರೀತಿಯಲ್ಲಿ ಈ ಕಳ್ಳತನವನ್ನು ತಡೆಗಟ್ಟಬೇಕು. ಎಲ್ಲಿ ದೂರು ನೀಡಬೇಕು ಎನ್ನುವ ಗೊಂದಲ ಜಿಲ್ಲೆಯ ರೈತರಲ್ಲಿ ಪ್ರಾರಂಭವಾಗಿದೆ.
ವ್ಯಾಪಕ ಕಳ್ಳತನ: ಜಿಲ್ಲೆಯಲ್ಲಿ ರೋಣ ಮತ್ತು ಗದಗ ತಾಲೂಕಿನಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ. ಆಯಾ ಗ್ರಾಮದಲ್ಲಿ ಉತ್ತಮವಾಗಿ ಬೆಳೆದ ಈರುಳ್ಳಿ ಹೊಲಗಳನ್ನು ಗಮನಿಸಿ, ಆ ರೈತರು ಮನೆಗೆ ಬಂದ ನಂತರ ರಾತ್ರಿಯ ವೇಳೆ ಹೊಲಕ್ಕೆ ಲಗ್ಗೆ ಹಾಕುವ ಕಳ್ಳರು, ಉತ್ತಮವಾಗಿರುವ ಈರುಳ್ಳಿಗಳನ್ನಷ್ಟೇ ಕಿತ್ತು, ಅದೇ ಹೊಲದಲ್ಲಿಯೇ ಸ್ವಚ್ಛಗೊಳಿಸಿಕೊಂಡು ಅಲ್ಲಿಂದಲೇ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದಕ್ಕಾಗಿ 10ರಿಂದ 15 ಜನರಿರುವ ತಂಡಗಳನ್ನೇ ರಚನೆ ಮಾಡಿಕೊಂಡಿದ್ದು, ಅಗತ್ಯ ಬಿದ್ದಲ್ಲಿ ವಾಹನಗಳನ್ನೂ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಸ್ಥಳೀಯರ ಸಹಕಾರ: ಈರುಳ್ಳಿಯ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನೇ ಲಾಭದಾಯಕವಾಗಿ ಮಾಡಿಕೊಳ್ಳಲು ಹವಣಿಸುತ್ತಿರುವ ಕಳ್ಳರು ಇದಕ್ಕಾಗಿ ವಾಹನಗಳನ್ನು (ಗೂಡ್ಸ್ ವಾಹನ) ಹೊಂದಿರುವ ವ್ಯಕ್ತಿಗಳನ್ನು ತಮ್ಮ ತಂಡದಲ್ಲಿ ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆ ಗ್ರಾಮದಲ್ಲಿನ ಕೆಲವರ (ಸ್ಥಳೀಯರ) ಸಹಕಾರವನ್ನು ಪಡೆದು ರಾತ್ರಿಯಾಗುತ್ತಿದ್ದಂತೆ ಕಾರ್ಯಾಚರಣೆಗೆ ಇಳಿಯುತ್ತಾರೆ. ಪ್ರತಿದಿನ ರಾತ್ರಿಯೂ ಇದೇ ಕಾಯಕದಲ್ಲಿ ತೊಡಗುವ ಇವರೆಲ್ಲ ರೈತರು ಬೆಳೆದ ಈರುಳ್ಳಿಯನ್ನು ಕದ್ದು ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಬಡ ರೈತರೇ ಟಾರ್ಗೆಟ್: ಈ ರೀತಿ ಹೊಲದಲ್ಲಿನ ಈರುಳ್ಳಿ ಕಳ್ಳತನ ಮಾಡುವ ಕಳ್ಳರ ತಂಡಗಳು ಗ್ರಾಮದಲ್ಲಿರುವ ಬಡ ರೈತರ ಹೊಲಗಳನ್ನೇ ಟಾರ್ಗೆಟ್ ಮಾಡಿವೆ. ಅವರ ಬಳಿ ಯಾವುದೇ ವಾಹನಗಳು ಇಲ್ಲದಿರುವುದರಿಂದ ರಾತ್ರಿ ಸಮಯದಲ್ಲಿ ಅವರು ಹೊಲಕ್ಕೆ ಬರುವ ಸಾಧ್ಯತೆ ಕಡಿಮೆ. ಹೀಗಾಗಿ, ಅವರ ಹೊಲಗಳಲ್ಲಿ ಉತ್ತಮವಾಗಿ ಬೆಳೆದ ಈರುಳ್ಳಿಯನ್ನು ಕಿತ್ತು ಸ್ವಚ್ಛಗೊಳಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ.
ಒಂದು ಹೊಲದಲ್ಲಿ 10ರಿಂದ 15 ಪೀಸಿ (50 ಕೆಜಿ ಚೀಲ) ಈರುಳ್ಳಿ ಮಾತ್ರ ಕಿತ್ತು ಮತ್ತೆ ಮುಂದಿನ ಹೊಲಕ್ಕೆ ಕಳ್ಳರು ಲಗ್ಗೆ ಇಡುತ್ತಿದ್ದಾರೆ. ಇವರನ್ನು ನಿಯಂತ್ರಿಸುವುದು ಹೇಗೆ ಎನ್ನುವುದೇ ಸವಾಲಿನ ವಿಷಯವಾಗಿದೆ.
ಪ್ರಕರಣ ದಾಖಲಾಗಿಲ್ಲ: ಇಲ್ಲಿ ವರೆಗೆ ಜಿಲ್ಲೆಯ ರೋಣ ಹಾಗೂ ಗದಗ ತಾಲೂಕುಗಳ 14 ಗ್ರಾಮಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಆದರೆ, ಯಾವುದೇ ರೈತರು ಈ ಕುರಿತು ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಇದಕ್ಕೆ ಮುಖ್ಯ ಕಾರಣ, ಕಳ್ಳರು ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಕಳ್ಳತನ ಮಾಡುವುದು.
ಈಗಾಗಲೇ ಸ್ವಲ್ಪ ಕಳ್ಳತನ ಮಾಡಿದ್ದಾರೆ. ದೂರು ನೀಡಿ, ಪೊಲೀಸ್ ಠಾಣೆಗೆ ಅಲೆಯುತ್ತ ಕುಳಿತರೆ ಇದ್ದಷ್ಟು ಬೆಳೆಯನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯದಲ್ಲಿ ಯಾರೂ ದೂರು ನೀಡುತ್ತಿಲ್ಲ. ಇದು ಕಳ್ಳರಿಗೆ ಪರೋಕ್ಷವಾಗಿ ಅನುಕೂಲಕಾರಿಯಾಗಿದ್ದು, ಯಾವುದೇ ಭಯವಿಲ್ಲದೇ ಮತ್ತೆ ತಮ್ಮ ಕಳ್ಳತನದಲ್ಲಿ ತೊಡಗುತ್ತಿದ್ದಾರೆ.
ಸರದಿಯಲ್ಲಿ ಕಾವಲು
ಈರುಳ್ಳಿ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾ ಗ್ರಾಮದಲ್ಲಿರುವ ರೈತರೇ ಒಂದು ತಂಡವನ್ನು ರಚಿಸಿಕೊಂಡು, ಸರದಿಯಲ್ಲಿ ರಾತ್ರಿ ಈರುಳ್ಳಿ ಬೆಳೆದ ಹೊಲಗಳನ್ನು ಕಾಯುತ್ತಿದ್ದಾರೆ. ಅದಕ್ಕಾಗಿ ರೈತರು ವಾಹನಗಳಲ್ಲಿ ಸಂಚರಿಸುವ ಒಂದು ತಂಡವನ್ನು ಮಾಡಿಕೊಂಡಿದ್ದಾರೆ. ಅವರು ಗ್ರಾಮದ ಗಡಿಯನ್ನೆಲ್ಲ ಕಾಯ್ದರೆ, ನಾಲ್ಕಾರು ಬೈಕ್ಗಳಲ್ಲಿ ರೈತರು ಇನ್ನೊಂದೆಡೆ ಆಗಾಗ್ಗೆ ಹೊಲಕ್ಕೆ ಭೇಟಿ ನೀಡುತ್ತಿದ್ದಾರೆ. ಹಲವಾರು ಸಮಸ್ಯೆಗಳ ಮಧ್ಯೆ ಬೆಳೆದಿರುವ ಈರುಳ್ಳಿಯನ್ನು ಕಳ್ಳರಿಂದ ಉಳಿಸಿಕೊಳ್ಳಲು ರೈತರು ಹರಸಾಹಸ ಮಾಡುತ್ತಿದ್ದಾರೆ.
ಉತ್ತಮ ಬೆಲೆಯಿಂದ ಕಳ್ಳತನ
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವುದರಿಂದ ಕಳ್ಳರು ಹೊಲದಲ್ಲಿನ ಈರುಳ್ಳಿಯನ್ನು ಕಳ್ಳತನ ಮಾಡುತ್ತಿದ್ದಾರೆ. ರೈತರಾದ ನಮಗೆ ಹಿಂಗಾರಿ ಬಿತ್ತನೆ ಸೇರಿದಂತೆ ಈರುಳ್ಳಿ ಹೊರತು ಪಡಿಸಿ ಸಾಕಷ್ಟು ಕೆಲಸಗಳಿರುತ್ತವೆ. ನಾವು ಅವುಗಳಲ್ಲಿ ತೊಡಗಿಕೊಳ್ಳುತ್ತಿರುವುದನ್ನೇ ಗಮನಿಸುವ ಕಳ್ಳರು ಈರುಳ್ಳಿ ಕಳ್ಳತನ ಮಾಡುತ್ತಿದ್ದಾರೆ. ಅದಕ್ಕಾಗಿ ನಾವೇ ನಮ್ಮ ಹೊಲಗಳನ್ನು ಕಾಯ್ದುಕೊಳ್ಳುವ ನಿರ್ಧಾರಕ್ಕೆ ಬಂದಿದ್ದೇವೆ.
- ಶಿವಲಿಂಗಪ್ಪ ಜಾಧವ, ಮಾರುತೆಪ್ಪ ಹಂಡಿ,
ಜಿಲ್ಲೆಯ ವಿವಿಧ ಗ್ರಾಮಗಳ ರೈತರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement