ಗ್ರಾಹಕರ ಸಮಸ್ಯೆ ನೀಗಿಸುವವನೇ ಉತ್ತಮ ಬ್ಯಾಂಕರ್
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 24
ಆತ್ಮವಿಶ್ವಾಸ ಹೊಂದಿ ಗ್ರಾಹಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವವನೇ ಉತ್ತಮ ಬ್ಯಾಂಕರ್ನಾಗಿ ಹೊರಹೊಮ್ಮಲು ಸಾಧ್ಯ ಎಂದು ಯೂನಿಯನ್ ಬ್ಯಾಂಕ್, ಮಂಗಳೂರು ವಲಯ ಕಚೇರಿ ಮುಖ್ಯಸ್ಥ(ಎಜಿಎಂ) ವೆಂಕಟೇಶ ಅಭಿಪ್ರಾಯಪಟ್ಟರು.
ಯೂನಿಯನ್ ಬ್ಯಾಂಕ್ ಕೇಶ್ವಾಪುರ ಶಾಖೆ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಹೆಚ್ಚು ಸಮಯ ಕುಟುಂಬದವರೊಂದಿಗೆ ಕಳೆಯಲು ಸಾಧ್ಯವಾಗುವುದಿಲ್ಲ ಎಂದರು.
ಸಹೋದ್ಯೋಗಿಗಳೊಂದಿಗೆ ಕೌಟುಂಬಿಕ ಬಾಂಧವ್ಯ ಹೊಂದಿ ಕೆಲಸ ನಿರ್ವಹಿಸಿದಲ್ಲಿ ಮಾನಸಿಕ ನೆಮ್ಮದಿ ಹಾಗೂ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ತಾವು ಇದೀಗ ಬ್ಯಾಂಕಿನ ಮಂಗಳೂರು ವಲಯ ಕಚೇರಿ ಮುಖ್ಯಸ್ಥಾನಕ್ಕೇರಲು ಸಿಬ್ಬಂದಿಯ ಸಹಕಾರವೇ ಕಾರಣ ಎಂದು ವಿನಮ್ರತೆಯಿಂದ ನುಡಿದರು.
ಯೂನಿಯನ್ ಬ್ಯಾಂಕ್ ಮುಖ್ಯ ಶಾಖೆಯ ಹಿರಿಯ ವ್ಯವಸ್ಥಾಪಕ ಆರ್.ಎಸ್. ಸವದಿ ಮಾತನಾಡಿ, ಇದೀಗ ಎಜಿಎಂ ಆಗಿ ಬಡ್ತಿ ಪಡೆದಿರುವ ವೆಂಕಟೇಶ ಅವರು ಎಂದಿಗೂ ಬಡ್ತಿಗಾಗಿ ಆಸೆ ಪಟ್ಟವರಲ್ಲ. ಅವರಲ್ಲಿನ ವ್ಯಕ್ತಿತ್ವ, ಕಾರ್ಯಕ್ಷಮತೆಗೆ ಎಜಿಎಂ ಸ್ಥಾನ ಹುಡುಕಿಕೊಂಡು ಬಂದಿದ್ದು, ಭವಿಷ್ಯದಲ್ಲಿ ಅವರು ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು.
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಬಿ.ಕೆ. ಶ್ರೀಧರ, ನಿವೃತ್ತ ಕ್ಯಾಶಿಯರ್ ಪಿ.ಬಿ. ಕುಲಕರ್ಣಿ ಮಾತನಾಡಿ, ಕೆಲ ವಿಶಿಷ್ಟ ವ್ಯಕ್ತಿಗಳು ಮಾರ್ಗ ರೂಪಿಸಿಕೊಂಡು ಜೀವನದಲ್ಲಿ ಮಹತ್ತರ ಸ್ಥಾನಕ್ಕೇರುತ್ತಾರೆ. ಆ ಸಾಲಿನಲ್ಲಿ ವೆಂಕಟೇಶ ಅವರು ಸೇರಿದ್ದಾರೆ ಎಂದು ಬಣ್ಣಿಸಿದರು.
ಬ್ಯಾಂಕಿನ ಲಕ್ಷ್ಮೇಶ್ವರ ಶಾಖೆ ವ್ಯವಸ್ಥಾಪಕ ಪಿ.ಬಿ. ಗಾಮನಗಟ್ಟಿ, ಗದಗ ಶಾಖೆ ವ್ಯವಸ್ಥಾಪಕ ಆರ್.ಎಚ್. ಸುದರ್ಶನ್, ನರಗುಂದ ಶಾಖೆ ವ್ಯವಸ್ಥಾಪಕ ನಾಡಗೌಡ, ಧಾರವಾಡ ಶಾಖೆ ವ್ಯವಸ್ಥಾಪಕಿ ತೇಜಸ್ವಿನಿ, ನರಗುಂದ ಶಾಖೆ ಹಿರಿಯ ವ್ಯವಸ್ಥಾಪಕ ನಾಡಗೌಡ ಸೇರಿದಂತೆ ಮತ್ತಿತರರು ಮಾತನಾಡಿ, ವೆಂಕಟೇಶ ಅವರ ಗುಣಗಾನ ಮಾಡಿದರು.
ಜಯಶ್ರೀ ಕುಲಕರ್ಣಿ ಪ್ರಾರ್ಥಿಸಿದರು.