ನಮ್ಮ ಭಾಷೆ, ಪ್ರದೇಶ ಬಲಿಷ್ಠವಾಗಿಲ್ಲ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ನ. 24
ಕನ್ನಡ ನಾಡು ಭಾಷಾವಾರು ಪ್ರಾಂತ್ಯವಾಗಿ 57 ವರ್ಷ ಕಳೆದಿದೆ. ಆದರೂ, ನಮ್ಮ ನಾಡಿನ ಕನ್ನಡ ಭಾಷೆ ಮತ್ತು ಪ್ರದೇಶಗಳು ಬಲಿಷ್ಠವಾಗಿಲ್ಲ. ಇದು ನಮ್ಮ ಕನ್ನಡಿಗರ ದುರಾದೃಷ್ಟ. ಏಕೀಕರಣಕ್ಕಾಗಿ ಹೋರಾಡಿದ ರೂವಾರಿಗಳ ಹಿಂದಿನ ಉದ್ದೇಶ ಸರ್ಕಾರ ಈಡೇರಿಸಿಲ್ಲ. ಇಂದಿನ ಕನ್ನಡ ಮನಸ್ಸುಗಳು ಮೈಕೊಡವಿಕೊಂಡು ಏಳುವುದು ಅನಿವಾರ್ಯವಾಗಿದೆ ಎಂದು ಶಿಕ್ಷಕ, ಸಾಹಿತಿ ಆರ್.ಕೆ. ಬಾಗವಾನ ಅಭಿಪ್ರಾಯ ಪಟ್ಟರು.
ಸ್ಥಳೀಯ ವಿಘ್ನೇಶ್ವರ ವಿದ್ಯಾವರ್ಧಕ ಪಪೂ ಕಾಲೇಜಿನಲ್ಲಿ ಗದಗ ಜಿಲ್ಲಾ ಕಸಾಪ ರೋಣ ತಾಲೂಕು ಘಟಕ ವತಿಯಿಂದ ಶನಿವಾರ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಡೆದ ನುಡಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಕನ್ನಡದ ಬಗ್ಗೆ ಮಾತನಾಡಿ ಕೈತೊಳೆದುಕೊಳ್ಳುವ ಕೆಟ್ಟ ಸಂಪ್ರದಾಯವನ್ನು ನಾವುಗಳು ಎಲ್ಲಿ ವರೆಗೆ ಕೈ ಬಿಡುವುದಿಲ್ಲವೊ ಅಲ್ಲಿ ವರೆಗೆ ಕನ್ನಡಿಗರ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊಕಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾಡು, ನುಡಿ, ನೆಲ, ಜಲ, ಭಾಷೆ, ಸಂಸ್ಕೃತಿ ಉಳಿವಿಗಾಗಿ ಪ್ರತಿಯೊಬ್ಬರೂ ನಿರಂತರ ಹೋರಾಟ ಮಾಡಬೇಕು ಎಂದರು.
ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಬಸವರಾಜ ಮತ್ತಿಕಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರೋಣ ತಾಲೂಕು ಕಸಾಪ ಅಧ್ಯಕ್ಷ ಡಾ. ಶಿವರಾಜ ಗುರಿಕಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾ. ಅಮರೇಶ ಗಾಣಿಗೇರ, ಪ್ರಾ. ಡಿ.ಎಸ್. ಗಾಳಿ, ಶಿವಕುಮಾರ ಮಠದ, ಎ.ಬಿ. ಸಂಕನೂರ, ಎಂ.ಎಸ್. ಮಕಾನದಾರ, ಎ.ಬಿ. ವಿಶ್ವಬ್ರಾಹ್ಮಣ, ಎಸ್.ಕೆ. ಕುಂಬಾರ, ಎಂ.ಎಲ್. ಕೋಟಿ, ರೇಶ್ಮಾ ರಾಠೋಡ, ಸಂತೋಷ ಹಳ್ಳದ ಮುಂತಾದವರು ಉಪಸ್ಥಿತರಿದ್ದರು.