ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಡವರ ಬ್ಲ್ಯಾಂಕೆಟ್ಗೆ ಭಾರಿ ಬೇಡಿಕೆ

Mainashree
Updated On : 25 Nov 2013, 11:03 am

ಗಜೇಂದ್ರಗಡ: ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಒಂದು ವಾರದಿಂದ ಜೋರಾಗಿ ಬೀಸುತ್ತಿರುವ ಶೀತಗಾಳಿ ಪ್ರಭಾವಕ್ಕೆ ಜನ ನಡಗುತ್ತಿದ್ದಾರೆ. ಬಡವರ ಬ್ಲ್ಯಾಂಕೆಟ್ ಎಂದೇ ಪ್ರಸಿದ್ಧಿಯಾದ ಚಿತ್ತಾರದ ಕಲಾತ್ಮಕ ಕೌದಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಬಂದಿದೆ. ಪರಿಣಾಮ ಕೌದಿ ಹೊಲಿಯುವ ಮಹಿಳೆಯರಿಗೀಗ ಮಸ್ತ ಸೀಜನ್.
ಉತ್ತರ ಕರ್ನಾಟಕ ಜನ ಈಗ ಚಳಿಯ ಹೊಡೆತಕ್ಕೆ ಸಿಲುಕಿ ತತ್ತರಿಸುತ್ತಿದ್ದು, ಅದರಲ್ಲೂ ಗ್ರಾಮೀಣ ಭಾಗದ ಬಡ ಕುಟುಂಬದ ಮಹಿಳೆಯರು, ಮಕ್ಕಳು, ವೃದ್ಧರು ಇನ್ನಿತರ ಸದಸ್ಯರು ಮನೆಯಲ್ಲಿ ಸಂಗ್ರಹಿಸಿದ ಹಳೆಯ ಬಟ್ಟೆಯಿಂದ ಕೌದಿ ಹೊಲಿಸುವುದು ಸಾಮಾನ್ಯವಾಗಿದೆ.
ಕೌದಿ ಹೊದಿಯೋಕೆ ಅಂದ: ಬೇಸಿಗೆ, ಮಳೆಗಾಲ ಮುಗಿದು ಈಗ ಚಳಗಾಲ ಶುರುವಾಗಿದೆ. ಹಗಲು ಸಾಕಷ್ಟು ಬಿಸಿಲಿದ್ದರು ಸಂಜೆಯಾಗುತ್ತಿದ್ದಂತೆ ಚಳಿಯ ಪ್ರಭಾವ ಜನರನ್ನು ಆವರಿಸಿಕೊಳ್ಳಲು ಶುರುವಾಗಿದೆ. ಹೀಗಾಗಿ, ಬೆಚ್ಚಗಿನ ತಾಣ ಹುಡಕಲು ಜನ ಪ್ರಾರಂಭಿಸುತ್ತಿದ್ದಾರೆ. ನೆನೆಪಿನಂಚಿಗೆ ಸರಿಯುತ್ತ ಗೂಡು ಸೇರಿದ ಹಳೆಯ ಕೌದಿಗಳು ಈಗ ಜನರಿಗೆ ನೆನಪಾಗುತ್ತಿವೆ. ಇನ್ನೂ ಕೆಲವರು ಹೊಸದಾಗಿ ಕೌದಿ ಹೊಲಿಸಲು ಮುಂದಾಗಿದ್ದಾರೆ. ಬೇಸಿಗೆ ಕಾಲ ಕೌದಿ ಹೊಲಿಯೋಕೆ ಚಂದ, ಚಳಿಗಾಲ ಕೌದಿ ಹೊದಿಯೋಕೆ ಅಂದ ಎಂಬ ನಾಣ್ನುಡಿಯಂತೆ ಪಟ್ಟಣದ ಅದೆಷ್ಟೋ ಮಹಿಳೆಯರಿಗೆ ಇದು ಆಸರೆಯಾಗಿದೆ. ಆದರೆ, ಈ ಉದ್ಯೋಗ ಆಧುನಿಕ ಯಂತ್ರ, ತಂತ್ರಜ್ಷಾನ ಭರಾಟೆಗೆ ಸಿಲುಕಿ ಅವಸಾನ ಅಂಚಿಗೆ ತಲುಪಿದೆ.
ಹಳೆ ಬಟ್ಟೆಯೇ ಮೂಲ ವಸ್ತು: ಕೂಸಿಗೆ ಹಾಸುವ ಪುಟ್ಟ ಕೌದಿಯಿಂದ ಹಿಡಿದು ದೊಡ್ಡ ಕುಟುಂಬಗಳಲ್ಲಿ ಹತ್ತಾರು ಜನರು ಮಲಗಿಕೊಳ್ಳುವಷ್ಟು ವಿಶಾಲವಾದ ಕೌದಿಗಳನ್ನು ತಯಾರಿಸುತ್ತಾರೆ. ಪುಟ್ಟ ಕೌದಿಯನ್ನು ಒಬ್ಬರೇ ಹೊಲಿಯಲು ಕುಳಿತರೆ, ದೊಡ್ಡ ಕೌದಿಗೆ ಏಕಕಾಲದಲ್ಲಿ ನಾಲ್ಕಾರು ಜನರು ಒಂದೊಂದು ಮೂಲೆಗಳನ್ನು ಹಿಡಿದು ಹೊಲಿಯಲು ತೊಡಗುತ್ತಾರೆ.
ಹರಿದ, ಬಳಸಿ ಬಿಸಾಕಿದ ಅಥವಾ ಬಟ್ಟೆಗಳು, ಧೋತಿ, ಹಳೆ ಸೀರೆಗಳೆ ಕೌದಿಗೆ ಬೇಕಾಗುವ ಮೂಲ ಕಚ್ಚಾ ವಸ್ತುಗಳು. ಈ ಹಳೆಯ ಬಟ್ಟೆಗಳಲ್ಲಿನ ಗುಣಮಟ್ಟದ ಭಾಗವನ್ನು ಮಾತ್ರ ಅಳತೆಗೆ ತಕ್ಕಂತೆ ಕತ್ತರಿಸಿ ಒಂದರ ಮೇಲೊಂದರಂತೆ ಹೊದಿಸಿ ಹೊಲಿಯುತ್ತಾ ಹೋದಂತೆ ಬಣ್ಣ ಬಣ್ಣದ ಚಿತ್ತಾರದ ಕೌದಿ ಮನ ಸೆಳೆಯುತ್ತವೆ.
ಕಂಬಳಿಗೆ ಸೆಡ್ಡು ಹೊಡೆದ ಕೌದಿ: ದಶಕದ ಹಿಂದೆ ಕಂಬಳಿಗೆ ಸೆಡ್ಡು ಹೊಡೆದು ನಿಂತಿತ್ತು ಈ ಹರಕು ಅರಿವೆ ಕೌದಿ. ಇಂದು ಸಂಪೂರ್ಣ ಹತ್ತಿ ಬಟ್ಟೆಯಿಂದ ತಯಾರಾಗಿರುವುದರಿಂದ ಬೇಸಿಗೆಯಲ್ಲಿ ತಂಪು ಹಾಗೂ ಚಳಿಗಾಲದಲ್ಲಿ ಬೆಚ್ಚನೆಯ ಅನುಭವ ನೀಡುತ್ತದೆ. ಆದುದರಿಂದ ಈಗಲೂ ಹಳ್ಳಿಗಳಲ್ಲಿ ಕೌದಿಗಳು ಬಡವರ ಪಾಲಿನ ರತ್ನಗಂಬಳಿಯಾಗಿಯೇ ಉಳಿದಿವೆ.
ಪಟ್ಟಣದಲ್ಲಿ ಇನ್ನೂರಕ್ಕೂ ಹೆಚ್ಚು ಕುಟುಂಬಗಳು ಕೌದಿ ಹೊಲಿಯುವ ಕಾಯಕವನ್ನೇ ಅವಲಂಬಿಸಿವೆ. ಪುರುಷರು ಇತರ ಕೆಲಸಕ್ಕೆಂದು ಹೋದರೆ, ಓಣಿಯ ಮಹಿಳೆಯರೆಲ್ಲ ಗುಂಪು ಸೇರಿ ಕಟ್ಟೆಪುರಾಣ ಕೊಚ್ಚುತ್ತಾ ಕೌದಿ ಹೊಲಿಯುವುದನ್ನು ನೋಡುವುದೇ ಚೆಂದ.
ರಾಟೆಗಳ ಭರಾಟೆ: ಈಗ ಬಟ್ಟೆ ಹೊಲಿಯುವ ರಾಟೆಗಳನ್ನು ಕೌದಿ ಹೊಲಿಯಲು ಬಳಸುತ್ತಿರುವುದು ಕಂಡು ಬರುತ್ತಿದೆ. ಆದುದರಿಂದ ಕೌದಿ ಉದ್ಯೋಗಕ್ಕೆ ದರ್ಜಿಗಳು ಕೈ ಹಾಕಿದ್ದಾರೆ. ಕೆಲವರು ಜೀನ್ಸ್ ಬಟ್ಟೆ ಹೊಲಿಯಲು ಬಳಸಿ ಹಳೆಯದಾಗಿರುವ ರಾಟೆಗಳನ್ನು ಖರೀದಿಸಿ ಹಳ್ಳಿಗಳ ಕಡೆಗೆ ಬಂದು ಕಡಿಮೆ ಕೂಲಿಯಲ್ಲಿ ಕೌದಿ ಹೊಲಿದು ಕೂಡುತ್ತಿದ್ದರು.
ಮೊಳವೊಂದಕ್ಕೆ ರು. 20ರಿಂದ 30 ಯಷ್ಟು ಕಡಿಮೆ ಕೂಲಿ ಪಡೆಯುತ್ತಿರುವುದರಿಂದ ಹಳ್ಳಿಗರು ಕೈ ಹೊಲಿಗೆಗಿಂತ ರಾಟೆ ಹೋಲಿಗೆಯತ್ತ ಹೆಚ್ಚು ಆಸಕ್ತರಾಗಿದ್ದಾರೆ.

 ಡಿ.ಜಿ. ಮೋಮಿನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement