ಸುದ್ದಿ ಸಂಕ್ಷೇಪ
ಪಡಿತರ ಅಕ್ರಮ: ರೈಸ್ಮಿಲ್ ಮೇಲೆ ದಾಳಿ
ಗಂಗಾವತಿ: ಗಂಗಾವತಿ ತಾಲೂಕಿನ ದಾಸನಾಳ ಸೇತುವೆ ಬಳಿ ಇರುವ ಕೆ.ಪಿ. ರೈಸ್ ಮಿಲ್ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ಗಂಗಾವತಿ ತಹಸೀಲ್ದಾರ್ ಗಂಗಪ್ಪ ನೇತೃತ್ವದ ತಂಡ ಭಾನುವಾರ ಸಂಜೆ ದಾಳಿ ನಡೆಸಿ 1200 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡು ರೈಸ್ ಮಿಲ್ ಸೀಜ್ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಎಪಿಎಂಸಿ ಸದಸ್ಯ ಯಂಕಾರಡ್ಡಿ ಅವರ ಕೆ.ಪಿ. ರೈಸ್ಮಿಲ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎನ್ನುವ ಬಲ್ಲ ಮಾಹಿತಿಯ ಆಧಾರದ ಮೇಲೆ ಗಂಗಾವತಿ ತಹಸೀಲ್ದಾರ್ ಗಂಗಪ್ಪ ಹಾಗೂ ಶಿರಸ್ತೇದಾರ್ ನೇತೃತ್ವದ ತಂಡ ಭಾನುವಾರ ಏಕಾಏಕಿ ರೈಸ್ ಮಿಲ್ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ 1200 ಕ್ವಿಂಟಲ್ ಅಕ್ಕಿ ಸಂಗ್ರಹ ಮಾಡಿರುವುದು ಪತ್ತೆಯಾಗಿದ್ದು, ಎಲ್ಲ ಪಡಿತರ ಅಕ್ಕಿ ಚೀಲಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ರೈಸ್ಮಿಲ್ ಅನ್ನು ಸೀಜ್ ಮಾಡಿ ಮುದ್ರೆ ಜಡಿದಿದ್ದಾರೆ.
ನಾಪತ್ತೆ: ಎಪಿಎಂಸಿ ಸದಸ್ಯ ಯಂಕಾರಡ್ಡಿ ಎನ್ನುವವರಿಗೆ ಸೇರಿದ ರೈಸ್ಮಿಲ್ ಇದಾಗಿದ್ದು, ಮಾಹಿತಿ ಕೇಳಲು ತೆರಳಿದರೆ ಮಾಲೀಕ ಯಂಕಾರಡ್ಡಿ ಅವರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ರುದ್ರಭೂಮಿ ಕಾಮಗಾರಿ: ಸಿಇಒ ಮೆಚ್ಚುಗೆ
ಗದಗ: ತಾಲೂಕಿನ ಅಡವಿಸೋಮಾಪುರ ಗ್ರಾಮದ ಹಿಂದೂ ರುದ್ರಭೂಮಿಯಲ್ಲಿಯ ಕಾರ್ಯಗಳನ್ನು ಸಿಇಓ ವೀರಣ್ಣ ತುರಮುರಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಸಿಇಓ ವೀರಣ್ಣ ತುರಮರಿ, ರುದ್ರಭೂಮಿ ನಿರ್ಮಾಣ ಮಾಡಿರುವುದು ಉತ್ತಮ ಕಾರ್ಯ, ಸೂಕ್ತ ನಿರ್ವಹಣೆಯೊಂದಿಗೆ ಇನ್ನೂ ಹೆಚ್ಚಿನ ಕೆಲಸ ಕಾರ್ಯಗಳನ್ನು ಕೂಡಲೇ ನಿರ್ವಹಿಸುವಂತೆ ತಿಳಿಸಿದರು. ನಾವು ಮಾಡಿದ ಕಾರ್ಯಗಳು ಯಶಸ್ವಿಯಾಗಬೇಕಾದರೆ ಸಮರ್ಪಕ ನಿರ್ವಹಣೆ ಅಗತ್ಯ. ರುದ್ರಭೂಮಿಗೆ ತೆರಳುವ ನಮ್ಮ ಹೊಲ ನಮ್ಮ ದಾರಿ ಯೋಜನೆಯಲ್ಲಿ ರಸ್ತೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರು. 5 ಲಕ್ಷ, ಗ್ರಾಮದ ಕೃಷಿ ಉತ್ಪನ್ನ ಮಾರುಕಟ್ಟೆ ಎದುರಿಗೆ ರೈತರ ಕಣ ನಿರ್ಮಾಣಮಾಡಲು ಹೆಚ್ಚುವರಿಯಾಗಿ ರು. 5 ಲಕ್ಷ ಹಾಗೂ ಪ್ರೌಢಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ ಹೆಚ್ಚುವರಿಯಾಗಿ ರು. 5 ಲಕ್ಷ ನೀಡುವುದಾಗಿ ಹೇಳಿದರು. ಎಇಇ ಯು.ಎಚ್. ಮಂಟಸೊಪ್ಪಿ, ಕಿರಿಯ ಅಭಿಯಂತರ ಯು.ಪಿ. ಚಾಟಿ, ಸಂಗಮ, ಜೆ.ಕೆ. ಬಾಳೋಸಾ, ತಾಪಂ ಸದಸ್ಯ ಪ್ರಹ್ಲಾದ್ ಹೊಸಳ್ಳಿ, ಪಿಡಿಒ ಅಶ್ವಿನಿ ಕುರಡಗಿ, ಸೌಮ್ಯ ಕುಲಕರ್ಣಿ, ಗ್ರಾಪಂ ಅಧ್ಯಕ್ಷ ರಮೇಶ ಲಮಾಣಿ, ಉಪಾಧ್ಯಕ್ಷೆ ನಾಗವ್ವ ಹುಡೇದ, ಸದಸ್ಯ ಫಕೀರಪ್ಪ ಜಡಿ, ತುಕಾರಾಮ ಹುಲಗಣ್ಣವರ, ಮಹಾಂತೇಶ ದೊಡವಾಡ, ಹನಮಂತ ಹೊಂಬಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.