ಅಸಾಂಪ್ರದಾಯಿಕ ಶಕ್ತಿಯ ಮೂಲಗಳ ಶೋಧನೆ ಅವಶ್ಯ
ಗದಗ: ಭವಿಷ್ಯತ್ತಿನಲ್ಲಿ ಸಾಂಪ್ರದಾಯಿಕ ಶಕ್ತಿಗಳು ಬರಿದಾಗುವ ಹಂತದಲ್ಲಿದ್ದು, ಅದಕ್ಕೆ ಪರ್ಯಾಯವಾಗಿ ವಿನೂತನ ಅಸಾಂಪ್ರದಾಯಿಕ ಶಕ್ತಿಯ ಮೂಲಗಳ ಶೋಧನೆ ಅವಶ್ಯವಾಗಿದೆ ಎಂದು ರಾಜ್ಯ ವಿಜ್ಞಾನ ಪರಿಷತ್‌ನ ಅಧ್ಯಕ್ಷ ಪ್ರಾ. ಎಸ್.ವಿ. ಸಂಕನೂರ ಹೇಳಿದರು.
ಅವರು ಸ್ಥಳೀಯ ಜ. ಶಿವಾನಂದ ಪಪೂ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ 21ನೇ ಮಕ್ಕಳ ರಾಷ್ಟ್ರೀಯ ವಿಜ್ಞಾನ ಸಮಾವೇಶದ ಜಿಲ್ಲಾ ಮಟ್ಟದ ಪ್ರಬಂಧ ಮಂಡನಾ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ವಿಜೇತರನ್ನು ಅಭಿನಂದಿಸಿ ಮಾತನಾಡಿದರು. ಮುಂಬರುವ 3 ದಶಕಗಳಲ್ಲಿ ಸಂಪ್ರದಾಯಿಕ ಶಕ್ತಿಯ ಮೂಲಗಳಾದ ಕಲ್ಲಿದ್ದಲು, ಪೆಟ್ರೋಲ್‌ನಂತಹ ಇಂಧನಗಳು ಬರಿದಾಗುವ ಹಂತದಲ್ಲಿವೆ. ಅದಕ್ಕೆ ಪರ್ಯಾಯವಾಗಿ ಅಸಂಪ್ರದಾಯಿಕ ಶಕ್ತಿಯ ಮೂಲಗಳಾದ ಸೌರಶಕ್ತಿ, ಜೈವಿಕ ಇಂಧನಗಳಂತಹ ವಸ್ತುಗಳ ಮೇಲೆ ಅವಲಂಬನೆ ಅನಿವಾರ್ಯ. ಆದ್ದರಿಂದ ಕೃಷಿ ತ್ಯಾಜ್ಯದಿಂದಲೂ ಸಾಕಷ್ಟು ಇಂಧನ ಉತ್ಪಾದಿಸಲು ಅವಕಾಶವಿದ್ದು, ಈ ದಿಸೆಯಲ್ಲಿ ಸಂಶೋಧನೆಗಳು ಹೆಚ್ಚು ಹೆಚ್ಚು ನಡೆಯುವಂತಾಗಬೇಕು ಎಂದರು. ಅನ್ನದಾನ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಬಂಧ ಮಂಡನೆಯಲ್ಲಿ ವಿಜಯಲಕ್ಷ್ಮೀ ಕದಂ, ಹರೀಶ ಅರಳಿಹಳ್ಳಿ, ವಿಜಯಲಕ್ಷ್ಮೀ ಬಂಡಿವಾಡ, ಪ್ರಗತಿ ದಿಂಡೂರ, ಆಶಾ ಬಳ್ಳಾರಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.
ಶೈಕ್ಷಣಿಕ ಸಂಚಾಲಕ ಐ.ಎಂ. ಗಾಣಿಗೇರ ಸ್ವಾಗತಿಸಿದರು. ಪಿ.ಎಫ್. ಹಿರೇಮಠ ನಿರೂಪಿಸಿದರು. ಎನ್.ವಿ. ಜೋಷಿ ವಂದಿಸಿದರು.