ರೇಲ್ವೆ ಮಾರ್ಗಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಮುಂಡರಗಿ, ನ. 25
2009 ರಿಂದ 2013ರ ವರೆಗೆ ಗದಗದಿಂದ ಹರಿಹರಕ್ಕೆ ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ನೂತನ ರೇಲ್ವೆ ಮಾರ್ಗ ಮಂಜೂರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡುತ್ತ ಬಂದಿದ್ದು, ಯಾವುದೇ ಪ್ರಯೋಜನವಾಗದ್ದರಿಂದ ಸೋಮವಾರದಿಂದ ನ. 29ರ ವರೆಗೆ ಸ್ಥಳೀಯ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯಿಂದ ತಹಸೀಲ್ದಾರ್ ಕಾರ್ಯಾಲಯದ ಎದುರಿನಲ್ಲಿ ಧರಣಿ ಸತ್ಯಾಗ್ರಹ ಪ್ರಾರಂಭವಾಗಿದೆ.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವರಾಜ ನವಲಗುಂದ ಮಾತನಾಡಿ, ರೇಲ್ವೆ ಮಾರ್ಗ ಮಂಜೂರಾತಿಗಾಗಿ ಒತ್ತಾಯಿಸಿ ಮುಂಡರಗಿ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ, ಜಿಲ್ಲಾಧಿಕಾರಿಯಿಂದ ನೈರುತ್ಯ ರೇಲ್ವೆ ಇಲಾಖೆಯ ಮುಖ್ಯ ವ್ಯವಸ್ಥಾಪಕರಿಗೆ, ನೈರುತ್ಯ ರೇಲ್ವೆ ಮುಖ್ಯ ವ್ಯವಸ್ಥಾಪಕರಿಂದ ರಾಜ್ಯದ ಮುಖ್ಯಮಂತ್ರಿಗೆ, ಮುಖ್ಯಮಂತ್ರಿಯಿಂದ ಕೇಂದ್ರದ ರೇಲ್ವೆ ಸಚಿವರಿಗೆ ಮನವಿ ಅರ್ಪಿಸುತ್ತ ಬಂದಿದ್ದರೂ ಕೇಂದ್ರ ಸರ್ಕಾರ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.
ನಮ್ಮ ಮನವಿ ಪತ್ರಗಳನ್ನು ಪುನರ್ ಪರಿಶೀಲನೆ ಮಾಡಿ, ಈ ಭಾಗದ ಸಾರ್ವಜನಿಕರ ರೇಲ್ವೆ ಬೇಡಿಕೆಗೆ ಸ್ಪಂದಿಸಬೇಕು. ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚಿಸಬೇಕೆಂದು ಈ ಧರಣಿ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಬೆಂಗಳೂರು ವಿಧಾನಸೌಧದ ಎದುರಿನಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಯಮನಪ್ಪ ಭಜಂತ್ರಿ, ಕೊಟ್ರಗೌಡ ಪಾಟೀಲ, ಅಂದಾನಗೌಡ ಕುಲಕರ್ಣಿ, ಸಹದೇವಪ್ಪ ಭಜಂತ್ರಿ, ಬಸಪ್ಪ ವಡ್ಡರ, ತಿಮ್ಮಣ್ಣ ಬಂಡಿ, ದೇವೆಂದ್ರಪ್ಪ ಕಟ್ಟಿಮನಿ, ಬಿ.ಎಸ್. ಹೂಗಾರ, ಕುರುವತೆಪ್ಪ ಅರಿಶಿನದ, ನಿಂಗನಗೌಡ ಪಾಟೀಲ, ಮೋಹನಗೌಡ ಪಾಟೀಲ, ಲಕ್ಷ್ಣಣ ತಗಡಿನಮನಿ ಮುಂತಾದವರು ಉಪಸ್ಥಿತರಿದ್ದು, ಬೆಂಬಲ ಸೂಚಿಸಿದ್ದಾರೆ.